ಕುಣಿಗಲ್: ಕಾಂಗ್ರೆಸ್ ನವರು ಅಭಿವೃದ್ಧಿ ಕಾರ್ಯ ಮಾಡದೆ ಪಾಪದ ಹಣದಿಂದ ಜನತೆಗೆ ಗಿಫ್ಟ್ ಕೊಟ್ಟು ಮರುಳು ಮಾಡುತ್ತಿದ್ದಾರೆ. ಕುಣಿಗಲ್ ತಾಲೂಕು ಸೇರಿದಂತೆ ರಾಮನಗರದಲ್ಲೂ ಇವರು ಇದೇ ಕಥೆ, ಈ ಬಗ್ಗೆ ತಾಯಂದಿರು ಎಚ್ಚರದಿಂದ ಇರಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಪಂಚರತ್ನ ರಥಯಾತ್ರೆಯನ್ನು ತಾಲೂಕಿನಲ್ಲಿ ಹಮ್ಮಿಕೊಂಡು, ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ್ದು ಅಭಿಮಾನಿಗಳು ಕಜ್ಜಾಯ, ತೆಂಗಿನ ಕೊಬ್ಬರಿ ಬೃಹತ್ ಹಾರ ಹಾಕಿ ಸ್ವಾಗತಿಸಿದರು. ನಿಗದಿತ ವೇಳೆಗಿಂತ ಎರಡು ಗಂಟೆ ತಡವಾಗಿ ಬಂದ ಮಾಜಿ ಸಿಎಂ ಅಭಿಮಾನಿಗಳು ಸುಡುಬಿಸಿಲು ಲೆಕ್ಕಿಸದೆ ಸ್ವಾಗತಿಸಿದರು. ಯಡಿಯೂರು ಸರ್ಕಲ್ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸಮ್ಮಿಶ್ರಸರ್ಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಲು ಇದೆ ಕಾಂಗ್ರೆಸ್ ನವರ ಅಪಸ್ವರದ ನಡುವೆ ಸಾಲಮನ್ನಾ ಮಾಡಿದೆ.
ರೈತರ ಸಾಲ ಮನ್ನಾ ಮಾಡುವ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿ 26 ಲಕ್ಷ ರೈತ ಕುಟುಂಬಗಳ 25 ಸಾವಿರ ಕೋಟಿ ಮನ್ನಾ ಮಾಡಿದೆ. ಪೂರ್ಣ ಪ್ರಮಾಣದ ಜೆಡಿಎಸ್ ಸರ್ಕಾರಕ್ಕೆ ಜನಾಶೀರ್ವಾದ ಮಾಡಿದಲ್ಲಿ ರೈತರ ಸಾಲ ಮನ್ನಾ ಮಾಡುವ ಜೊತೆಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ರೈತರಿಗೆ ವಾರ್ಷಿಕ ಹತ್ತು ಸಾವಿರ ಹಣ ನೀಡುವುದಾಗಿ, ರಾಗಿ ಖರೀದಿಗೆ ಇರುವ ಸಣ್ಣ, ದೊಡ್ಡ ರೈತರ ಭೇದ ವಜಾ ಮಾಡುವುದು. ಸ್ತ್ರೀಶಕ್ತಿ ಯೋಜನೆಯಡಿಲ್ಲಿ ಸಾಲ ಪಡೆದವರ ಮಹಿಳೆಯರ ಸಾಲ ಅಧಿಕಾರಕ್ಕೆ ಬಂದ ತಕ್ಷಣ ಮನ್ನಾ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಗ್ರಾಮ ಪಂಚಾಯಿತಿಗೆ ಒಂದರಂತೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಹಳಿತಪ್ಪಿದೆ. ರಾಜ್ಯದ ಜನತೆಗೆ ಉತ್ತುಮ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಜೆಡಿಎಸ್ನಿಂದ ಮಾತ್ರ ಸಾಧ್ಯ. ಹಾಲಿ ಸರ್ಕಾರ ಆಸ್ಪತ್ರೆ ಕಟ್ಟಡ ಕಟ್ಟುವುದರಲ್ಲಿ ಆಸಕ್ತಿ ವಹಿಸುತ್ತಿದೆ ಹೊರತು ಅದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿಯ ನಿಯೋಜನೆಗೆ ಮನಸು ಮಾಡುತ್ತಿಲ್ಲ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರು, ಮಹಿಳೆಯರ ಸಾಲ ಮನ್ನಾ ಮಾಡುವ ಜೊತೆಯಲ್ಲಿ ಅವರ ಸ್ವಾವಲಂಬಿ ಜೀವನ ನಿರ್ವಹಣೆಗೆ ಪೂರಕ ಕಾರ್ಯಕ್ರಮ ನೀಡಲಾಗುವುದು. ತುರುವೇಕೆರೆ, ಕುಣಿಗಲ್ ತಾಲೂಕಿನ ಮಧ್ಯ ಭಾಗದಲ್ಲಿ ಉದ್ಯೋಗವಕಾಶ ಸೃಷ್ಟಿಗೆ ಕೈಗಾರಿಕೆ ಸ್ಥಾಪನೆಗೆ ಶ್ರಮಿಸುವುದಾಗಿ ಹೇಳಿದರು.
ಮಂಡ್ಯದಲ್ಲಿ ಇಂದು ಬಿಜೆಪಿ ಮಹಾನ್ನಾಯಕರು ದೊಡ್ಡಸಭೆ ಮಾಡುತ್ತಿದ್ದಾರೆ. ಅಮಿತ್ಶಾ ಅವರು ರೈತರ 7200 ಕೋಟಿ ಸಹಕಾರ ಬ್ಯಾಂಕ್ ಸಾಲ ಮನ್ನಾ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಪೂರಕ ಯೋಜನೆ ಜೆಡಿಎಸ್ ಎಂಬುದು ಮರೆತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ತಮ್ಮ ಅಭಿವೃದ್ಧಿ ಪರ ಕೆಲಸ ಆಧಾರದ ಮೇಲೆ ಮತ ಕೇಳದೆ ಕುಕ್ಕರ್, ತವಾ ನೀಡುತ್ತಿದ್ದು ರಾಮನಗರದಲ್ಲೂ ಇದೆ ಮಾಡುತ್ತಿದ್ದಾರೆ. ಯಾವುದೋ ಏಜೆನ್ಸಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹಂಚುತ್ತಿದ್ದಾರೆ. ಇವರ ಸಣ್ಣತನದ ಆಸೆಗೆ ಮರುಳಾಗಬೇಡಿ. ನಿಮ್ಮ ಆರ್ಥಿಕ, ಸಾಮಾಜಿಕ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಬೆಂಬಲಿಸಿ, ಜೆಡಿಎಸ್ ಎಂದಿಗೂ ಯಾವುದೇ ಧರ್ಮ, ಜಾತಿಗೆ ಸೀಮಿತವಾದ ಪಕ್ಷವಲ್ಲ, ಸರ್ವ ಜನರ ಅಭಿವೃದ್ಧಿ ಜೆಡಿಎಸ್ ಸಂಕಲ್ಪ, ತಾಲೂಕಿನ ಜನಪರ ರಾಜಕಾರಣ ಮಾಡುತ್ತಾ ದೇವೇಗೌಡರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಡಿ.ನಾಗರಾಜಯ್ಯ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಅವರನ್ನು ಪುನಹ ಮಂತ್ರಿ ಮಾಡಬೇಕೆಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ, ಜಿಪಂ ಮಾಜಿ ಅಧ್ಯಕ್ಷ ಡಾ.ರವಿಬಾಬು, ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ, ಪ್ರಮುಖರಾದ ಕೆ.ಎಲ್.ಹರೀಶ್, ಯೂಸೂಫ್, ಜಿಯಾವುಲ್ಲಾ, ಪ್ರಕಾಶ, ದೀಪು, ವೆಂಕಟೇಶ, ಆದರ್ಶ, ಹರೀಶನಾಯಕ, ಸುರೇಶ, ಮನೋಜ, ಮಹೇಶ, ರಮೇಶ ಇತರರು ಇದ್ದರು. ಯಡಿಯೂರಿನಿಂದ ಯಾತ್ರೆ ಮುಗಿಸಿ ಅಮೃತೂರು ವಿವಿಧ ಗ್ರಾಮಗಳ ಕಡೆ ತೆರಳಿದ ಯಾತ್ರೆಯಲ್ಲಿ ಮಾಜಿ ಸಿಎಂ ಅಭಿಮಾನಿಗಳು ಕುಂಬಳಕಾಯಿ ಹಾರ, ಅಡಿಕೆ ಹೂವಿನಹಾರ, ಕ್ಯಾಪ್ಸಿಕಂ ಹಾರ, ಬಾಳೆಕಾಯಿ ಹಾರ, ಕ್ಯಾರೆಟ್ ಹಾರ ಸೇರಿದಂತೆ ವಿವಿಧ ರೀತಿಯ ಹಾರ ಹಾಕುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.
Comments are closed.