ತುಮಕೂರು: ಕಳೆದ 45 ವರ್ಷಗಳಿಂದ ದೇಶದ ಯುವ ಸಮೂಹದಲ್ಲಿ ಭಾರತೀಯ ಪ್ರಾಚೀನ ಸಂಸ್ಕೃತಿ ಮತ್ತು ಏಕಾಗ್ರತೆ ಕಲೆಗಳ ಬಗ್ಗೆ ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಸೇವೆ ಸಲ್ಲಿಸಲಾಗುತ್ತಿದೆ ಎಂದು ಸ್ಪೈಕ್ ಮ್ಯಾಕಿ ಸಂಸ್ಥಾಪಕ, ಐಐಟಿಯ ಮಾಜಿ ಪ್ರಾಧ್ಯಾಪಕ ಮತ್ತು ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಶಾಸ್ತ್ರೀಯ ಸಂಗೀತದ ಸಂಸ್ಥಾಪಕ ಪದ್ಮಶ್ರೀ ಪುರಸ್ಕೃತ ಡಾ.ಕಿರಣ್ ಸೇಠ್ ಹೇಳಿದರು.
ಮನುಷ್ಯನ ಉತ್ತಮ ಆರೋಗ್ಯ ಮತ್ತು ಮಹಾತ್ಮ ಗಾಂಧಿಯವರ ತತ್ವಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಅವರ 145 ದಿನಗಳ ಸೈಕಲ್ ಯಾತ್ರೆ ಕೈಗೊಂಡಿರುವ ಇವರು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಕಲೆಗಳನ್ನು ಅಭ್ಯಸಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಏಕಾಗ್ರತೆ ವೃದ್ಧಿಸಿಕೊಳ್ಳಬಹುದು. ಸ್ವಯಂ ಸೇವಕರಿಂದ ನಡೆಯುವ ಸ್ಪೈಕ್ ಮ್ಯಾಕಿ ಸಂಸ್ಥೆಯು ರಾಷ್ಟ್ರದ ಹಿತಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದು, ಆ ಮೂಲಕ ದೇಶ ವಿದೇಶಗಳಲ್ಲಿ ಲಕ್ಷಾಂತರ ಯುವಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ ಎಂದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ.ಸೇಠ್, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೌಶಲ್ಯ ರೂಢಿಸಿಕೊಳ್ಳುವ ರೀತಿಯ ಬಗ್ಗೆ ತಿಳಿಸಿಕೊಟ್ಟರು. ಪಾಶ್ಚಿಮಾತ್ಯ ಮತ್ತು ಭಾರತೀಯ ಪರಿಕಲ್ಪನೆಯಲ್ಲಿ ಯೋಗವು ಆರೋಗ್ಯಕರ ಬೆಳವಣಿಗೆಗೆ ಮುಖ್ಯವಾಗಿದೆ. ಪ್ರಸ್ತುತ ಜಗತ್ತಿಗೆ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಸ್ತುತತೆಯ ಅವಶ್ಯಕತೆ ಹೆಚ್ಚಿದೆ. ಶಾಸ್ತ್ರೀಯ ಸಂಗೀತವು ಮನಸ್ಸನ್ನು ಪ್ರಶಾಂತವಾಗಿಸುತ್ತದೆ. ಧ್ಯಾನ ಮತ್ತು ಯೋಗದಿಂದ ಆರೋಗ್ಯ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಇದು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾಗಿದೆ ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಡಾ.ಕಿರಣ್ ಸೇಠ್ ಅವರು ತಮ್ಮ 73ನೇ ಇಳಿ ವಯಸ್ಸಿನಲ್ಲಿ ಸೈಕಲ್ ಜಾಥಾ ಮೂಲಕ 2022ರ ಆಗಸ್ಟ್ 15 ರಂದು ಕಾಶ್ಮೀರದಿಂದ ಹೊರಟ ಅವರು ಭಾರತದ ಸಂಸ್ಕೃತಿಯ ಮಹತ್ವವನ್ನು ದೇಶದ ಮೂಲೆ ಮೂಲೆಗಳಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸಿ ಕನ್ಯಾಕುಮಾರಿಯಲ್ಲಿ ತಮ್ಮ ಯಾತ್ರೆ ಪೂರ್ಣಗೊಳಿಸಲಿದ್ದಾರೆ. ಯೋಗ ಮತ್ತು ಭಾರತೀಯ ಸಂಗೀತವು ದೇಶದ ಶಕ್ತಿಯಾಗಿದೆ. ಇದನ್ನು ನಾವು ಪ್ರತಿನಿತ್ಯ ಅಭ್ಯಾಸ ಮಾಡಬೇಕು. ವ್ಯಕ್ತಿಯಲ್ಲಿರುವ ಖಿನ್ನತೆ, ಒತ್ತಡವನ್ನು ಇವು ದೂರ ಮಾಡಿ ಉತ್ತಮ ಮನೋಭಾವನೆ ತರುತ್ತವೆ. ಇದರಿಂದ ಸಮಾಜದಲ್ಲಿ ನಡೆಯುವ ಅಪರಾಧ ಕಡಿಮೆಯಾಗುತ್ತವೆ. ಉತ್ತಮ ಯೋಗಾಭ್ಯಾಸಿಯು ಖಂಡಿತ ಉತ್ತಮ ಭಾರತೀಯ ಪ್ರಜೆಯಾಗಿ ರೂಪುಗೊಳ್ಳುತ್ತಾನೆ. ಯುವ ಸಮೂಹ ಯೋಗ ಮತ್ತು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದರು.
ಡಾ.ಕಿರಣ್ ಸೇಠ್ ಅವರೊಂದಿಗೆ ಕೈ ಜೋಡಿಸಿ ಇಂತಹ ಮಹತ್ವವಾದ ಉದ್ದೇಶ ಹೊತ್ತಿರುವ ಸ್ಪೈಕ್ ಮ್ಯಾಕಿಯಲ್ಲಿ ಭಾಗವಹಿಸಲು ಈ ಸೈಕಲ್ ಯಾತ್ರೆಯು ಅವಕಾಶ ಕಲ್ಪಿಸಿದೆ. ಇಲ್ಲಿಯವರೆಗೂ 3500 ಕಿ.ಮೀ ಯಾತ್ರೆ ಮಾಡಿದ್ದು, ದೊಡ್ಡಬಳ್ಳಾಪುರ ಮೂಲಕ ಡಿಸೆಂಬರ್ 29 ರಂದು ತುಮಕೂರು ಜಿಲ್ಲೆ ಪ್ರವೇಶಿಸಿದ ಕಿರಣ್ ಸೇಠ್ ಅವರು ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರವೇಶಿಸಲಿದ್ದಾರೆ. ಸೈಕಲ್ ಯಾತ್ರೆ ಮೂಲಕ ದೇಶದ ಬುನಾದಿಯಾದ ಶಿಕ್ಷಣ ತಜ್ಞರನ್ನು ಶಿಕ್ಷಕ ವೃಂದ ಮತ್ತು ಯುವ ಪೀಳಿಗೆಯನ್ನು ಉತ್ತೇಜಿಸಲಿದ್ದಾರೆ. ಸ್ಪೈಕ್ ಮ್ಯಾಕಿ ಯೊಂದಿಗೆ ಸಹವರ್ತಿಸಲು ಮತ್ತು ಜೊತೆಗೂಡಲು ಕರ್ನಾಟಕದ ಸ್ವಯಂ ಸೇವಕ (ಮೊ.9483537697, 9141219269, 6362093267) ರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜನಾಧಿಕಾರಿ ನವೀನ್ ಕುಮಾರ್, ಎಂಪ್ರೆಸ್ ಕಾಲೇಜ್ ಪ್ರಾಚಾರ್ಯ ಷಣ್ಮುಖ ಎಸ್, ಉಪ ಪ್ರಾಚಾರ್ಯ ಶಿವಾಜಿರಾವ್ ಇತರರು ಇದ್ದರು.
Comments are closed.