ಕೋವಿಡ್ ವೇಳೆ ಆರೋಗ್ಯ ನಿರೀಕ್ಷರ ಸೇವೆ ಸ್ಮರಣೀಯ

83

Get real time updates directly on you device, subscribe now.


ತುಮಕೂರು: ಕೋವಿಡ್ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್.ಡಿ.ಎನ್.ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ, ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ 2023ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಇಲಾಖೆ ಸರಕಾರದ ಯಾವುದೇ ಕಾರ್ಯಕ್ರಮವನ್ನು ಸಮರ್ಥವಾಗಿ ನಿಭಾಯಿಸಿದೆ ಎಂದರೆ ಅದರಲ್ಲಿ ಆರೋಗ್ಯ ನಿರೀಕ್ಷಕರ ಪಾತ್ರ ಬಹಳಷ್ಟಿದೆ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.

ತುಮಕೂರು ಜಿಲ್ಲೆಯ 10 ತಾಲೂಕುಗಳನ್ನು ಒಳಗೊಂಡಿದ್ದು ಬಹಳ ದೊಡ್ಡ ಜಿಲ್ಲೆ, ಆರೋಗ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿಗಳು ಮತ್ತು ನೌಕರರ ನಡುವಿನ ಸಮನ್ವಯದ ಕೊರತೆಯಿಂದ ಇಲಾಖೆಯ ಕೆಲವು ಗುಟ್ಟು ಮಾಧ್ಯಮಗಳ ಮುಂದೆ ಬಹಿರಂಗಗೊಂಡು ಸಾಕಷ್ಟು ಮುಜುಗರದ ವಾತಾವರಣ ನಿರ್ಮಾಣವಾಗುತ್ತಿದೆ. ಮಾಧ್ಯಮದ ಪ್ರತಿನಿಧಿಗಳು ನಿಮ್ಮ ಬಂಧುವಾಗಿರಲಿ, ಸ್ನೇಹಿತರಾಗಿರಲಿ ಇಲಾಖೆಯಲ್ಲಿನ ಕೆಲ ಗೌಪತ್ಯೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಿವೆಲ್ಲರೂ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಡಿಹೆಚ್ಓ ಡಾ.ಮಂಜುನಾಥ್.ಡಿ.ಎನ್.ತಿಳಿಸಿದರು.

ಹೊಸ ವರ್ಷದ 2023ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ, ಜನ ಸಾಮಾನ್ಯರೊಂದಿಗೆ ನೇರವಾಗಿ ಸಂರ್ಪಕ ಬೆಳೆಸಿ ದೇಶದ ಕಟ್ಟಡ ಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ನೀಡುತ್ತಿರುವುದು ಆರೋಗ್ಯ ಇಲಾಖೆ, ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣ ಪಣಕ್ಕೆ ಇಟ್ಟು ಮಾಡಿದ ಸೇವೆಯಿಂದ ಇಡಿ ದೇಶದಲ್ಲಿಯೇ ಹೆಸರು ಮಾಡಲು ಸಾಧ್ಯವಾಯಿತು. ಇದರ ಕ್ರೆಡಿಟ್ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೂ ಸಲ್ಲಸಬೇಕೆಂದರು.

ಸಂಘ ಅಂದ ಮೇಲೆ ಬೇಡಿಕೆ ಇರಲೇಬೇಕು. ಸಂಘಟನೆ, ಬೇಡಿಕೆ, ಹೋರಾಟ ಇವು ಜೊತೆಯಾಗಿಯೇ ಹೋಗಬೇಕು. ಇತ್ತೀಚಿನ ದಿನಗಳಲ್ಲಿ ಕೆಲವರ ಪಿತೂರಿಗೆ ಒಳಗಾಗಿ ಸಂಘಟನೆಗಳಲ್ಲಿ ಒಡಕು ಮೂಡುತ್ತಿದೆ. ಹಳೆಯ ಪಿಂಚಿಣಿ ಪದ್ಧತಿ ಜಾರಿಗೆ ಇನ್ನೂ 26 ವರ್ಷಗಳ ಕಾಲಾವಕಾಶವಿದೆ. ಆದರೂ ಕೆಲವರು ಸರಕಾರದ ವಿರುದ್ಧ ಷಡ್ಯಂತ್ರ ನಡೆಸಿ, ಸಾವಿರಾರು ಎನ್ಪಿಎಸ್ ನೌಕರರನ್ನು ಬೆಳಗಾವಿ ಸುವರ್ಣ ಸೌಧದ ಬಳಿ ಸೇರಿಸಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಯಾವುದೇ ಹೋರಾಟ ನಡೆಸದೆ ನೌಕರರ ಪರವಾಗಿ 22 ವಿವಿಧ ಆದೇಶಗಳನ್ನು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮಾಡಿಸಿದ್ದಾರೆ. 7ನೇ ವೇತನ ಆಯೋಗದಲ್ಲಿ ನಾವು ಶೇ.40 ರಷ್ಟು ವೇತನ ಪಡೆಯುವುದು ಖಚಿತ. ಮುಂದಿನ ಏಪ್ರಿಲ್ನಲ್ಲಿ ಸಂಘದ ವತಿಯಿಂದಲೇ ಎನ್ಪಿಎಸ್ ವಿರುದ್ಧ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಕೆ.ಎಲ್.ಮಾತನಾಡಿ, ಆರೋಗ್ಯ ನಿರೀಕ್ಷಕರು ಶೇ.50 ಕ್ಕೂ ಹೆಚ್ಚು ಹುದ್ದೆಗಳ ಖಾಲಿ ಇದ್ದರೂ ಶೇ.100 ರಷ್ಟು ಸಮರ್ಪಕ ಸೇವೆ ಒದಗಿಸುತ್ತಿದ್ದೇವೆ. ಆದರೂ ನಮಗೆ 2-3 ತಿಂಗಳಿಗೊಮ್ಮೆ ವೇತನ ದೊರೆಯುತ್ತಿದೆ. ಒಬ್ಬ ಆರೋಗ್ಯ ನಿರೀಕ್ಷಕ 2-3 ಪಿಹೆಚ್ಸಿ ಗಳಲ್ಲಿ ಪ್ರಭಾರದಲ್ಲಿದ್ದು, ಸಾಕಷ್ಟು ಕಾರ್ಯ ಒತ್ತಡ ಅನುಭವಿಸುತಿದ್ದಾರೆ. ಕೊವೀಡ್ ಸಂದರ್ಭದಲ್ಲಿ ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದರೂ ಸರಕಾರ ಕೋವಿಡ್ ಪರಿಹಾರ ನೀಡುವಲ್ಲಿ ಪಿಪಿ ಕಿಟ್ ಧರಿಸಿ ಕೆಲಸ ಮಾಡಿದವರಿಗೆ ಮಾತ್ರ ಎನ್ನುವ ಷರತ್ತು ವಿಧಿಸುವ ಮೂಲಕ ನಮ್ಮ ಸೇವೆ ಕಡೆಗಣಿಸಿದೆ. ಈ ಕುರಿತು ಸರಕಾರಿ ನೌಕರರ ಸಂಘದ ಸಭೆಗಳಲ್ಲಿ ಚರ್ಚೆ ನಡೆಸಬೇಕೆಂದರು.
ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷ ಪರಶುರಾಮಪ್ಪ ಮಾತನಾಡಿ, ಆರೋಗ್ಯ ನಿರೀಕ್ಷಕರು ಕೋವಿಡ್ ಸಂದರ್ಭದಲ್ಲಿ ಖಾಲಿ ಹುದ್ದೆಗಳ ನೆಪ ಹೇಳದೆ ಹಗಲಿರುಳು ತಮ್ಮ ಪ್ರಾಣ ಪಣಕ್ಕಿಟ್ಟು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿದ್ದಾರೆ. ಅವರ ಸೇವೆ ಕಡೆಗಣಿಸಿ ಪರಿಹಾರ ನೀಡದಿರುವುದು ದುರಾದೃಷ್ಟಕರ ಎಂದರು.

ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ತುಮಕೂರು ಜಿಲ್ಲಾಧ್ಯಕ್ಷ ನಾಗೇಶ್.ಎಸ್. ಮಾತನಾಡಿ, 1957ರಲ್ಲಿ ಏಕೋದ್ದೇಶದಿಂದ ಆರಂಭವಾದ ನಮ್ಮ ಹುದ್ದೆ ನಂತರದ ವರ್ಷಗಳಲ್ಲಿ ವಿವಿಧೋದ್ದೇಶವಾಗಿ ಪರಿವರ್ತನೆಗೊಂಡಿದೆ. 2021ರಲ್ಲಿ ವೃಂದ ಬದಲಾವಣೆಯ ಹಿನ್ನೆಲೆಯಲ್ಲಿ ಈ ಸಂಘವನ್ನು ಹುಟ್ಟು ಹಾಕಲಾಗಿದೆ. ಕಳೆದ 6-7 ದಶಕದಿಂದ ಒಂದು ಗ್ರಾಮದ ಪ್ರತಿ ಮನೆಯ ಮಾಹಿತಿ ಕಲೆ ಹಾಕಿ ಅವರಿಗೆ ಆರೋಗ್ಯ ಸೇವೆ ಒದಗಿಸುವ ಕೆಲಸವನ್ನು ಆರೋಗ್ಯ ನಿರೀಕ್ಷಕರು ಮಾಡುತ್ತಿದ್ದಾರೆ. ಜಿಲ್ಲೆಗೆ 331 ಹುದ್ದೆ ಮಂಜೂರಾಗಿದ್ದು, 140 ಮಾತ್ರ ತುಂಬಲಾಗಿದೆ. ಶೇ.50 ಕ್ಕಿಂತಲೂ ಹೆಚ್ಚು ಹುದ್ದೆ ಖಾಲಿ ಇವೆ. ಸರಕಾರ ಖಾಲಿ ಹುದ್ದೆಗಳನ್ನು ನೇರ ನೇಮಕ ಮತ್ತು ಬಡ್ತಿ ಮೂಲಕ ತುಂಬುವ ಕೆಲಸ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಎನ್.ಪುರುಷೋತ್ತಮ್, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಜಿನಿ.ಎಂ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನ್ದಾಸ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಕೇಶವರಾಜ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶ್ರೀದೇವಿ ಚಂದ್ರಿಕಾ, ಆಡಳಿತಾಧಿಕಾರಿ ವಿಲ್ಸನ್ ಸ್ಯಾಮುವೆಲ್, ಬ್ರಹ್ಮಾನಂದಮ್, ಪದಾಧಿಕಾರಿಗಳಾದ ಪುಟ್ಟಯ್ಯ, ವಿಶ್ವೇಶ್ವರಯ್ಯ, ಬೋಜರಾಜು, ಬಸವರಾಜು, ಟಿ.ಶ್ರೀನಿವಾಸಮೂರ್ತಿ, ಯೋಗೀಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!