ತುಮಕೂರು: ಮಾನಸಿಕವಾಗಿ ಆರೋಗ್ಯವಾಗಿದ್ದರೆ, ಉತ್ತಮ ಜೀವನ ಸಾಗಿಸುವ ಆತ್ಮವಿಶ್ವಾಸ ಹೊಂದಿದ್ದರೆ ಅಂತಹವರಿಗೆ ವಿಕಲತೆ ಅಡ್ಡ ಬರುವುದಿಲ್ಲ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಗರದ ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ವಿಭಾಗಕ್ಕೆ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಹೃದಯ ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶೇಷ ಚೇತನರು ತಮ್ಮ ಬಗ್ಗೆ ಯಾವುದೇ ಕೀಳರಿಮೆ ಇಟ್ಟುಕೊಳ್ಳದೆ ಉನ್ನತ ಗುರಿಯಡೆಗೆ ಸಾಗಬೇಕು. ತಮ್ಮ ಕೊರತೆಯ ಜೊತೆಗೆ ಮನುಷ್ಯ ಸಹಜವಾಗಿ ಕಾಣಿಸಿಕೊಳ್ಳುವ ಇತರೆ ರೋಗಗಳ ಬಗ್ಗೆಯೂ ಕಾಳಜಿ ಹೊಂದಿ ಚಿಕಿತ್ಸೆ ಪಡೆಯಬೇಕು ಎಂದು ಕರೆ ನೀಡಿದರು.
ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್.ಹೆಚ್.ಎಂ. ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಕಳೆದ ಐದು ವರ್ಷಗಳಿಂದ ಸಹಸ್ತ್ರಾರು ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರದ ಮೂಲಕ ಆರೋಗ್ಯ ಅರಿವು ಮೂಡಿಸುತ್ತಾ ಬಂದಿದ್ದು, ಇದೀಗ ವಿಶೇಷ ಚೇತನರಿಗಾಗಿಯೇ ಉಚಿತ ಹೃದಯ ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶೇಷ ಚೇತನರಿಗೆಂದೇ ತಾಲೂಕುವಾರು ಆರೋಗ್ಯ ಶಿಬಿರ ಏರ್ಪಡಿಸಲಾಗುತ್ತದೆ ಎಂದರು.
ಫೀಲ್ಡ್ ಆಫೀಸರ್ ಛಲಪತಿ ಮಾತನಾಡಿ, ವಿಶೇಷ ಚೇತನರಾಗಿ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಅವರ ಕಾಳಜಿ ಮಾಡುವುದು ಸರ್ಕಾರದಷ್ಟೇ ಕರ್ತವ್ಯ ಎಂದು ಸುಮ್ಮನಾಗುವ ಜನರ ಮಧ್ಯೆ ಸಿದ್ಧಗಂಗಾ ಆಸ್ಪತ್ರೆ ವಿಶೇಷ ಚೇತನರಿಗಾಗಿಯೇ ಆರೋಗ್ಯ ಶಿಬಿರ ಏರ್ಪಡಿಸಿದ್ದು ಸಂತಸ ತಂದಿದೆ ಎಂದರು.
ಸುಮಾರು 150ಕ್ಕೂ ಹೆಚ್ಚು ಜನರಿಗೆ ಹೃದಯ ತಪಾಸಣೆಯ ಜೊತೆಗೆ ಬಿಪಿ, ಶುಗರ್, ಇಸಿಜಿ, ಎಕೋ ಪರೀಕ್ಷೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಹೃದ್ರೋಗ ತಜ್ಞ ಡಾ.ಶರತ್ ಕುಮಾರ್.ಜೆ.ವಿ, ಯೋಜನೆ ಸಹಾಯಕ ಧನಂಜಯ್, ಸಿದ್ಧಗಂಗಾ ಆಸ್ಪತ್ರೆಯ ರೂಪಾ ಹಾಗೂ ಪಿಆರ್ಓ ಕಾಂತರಾಜು ಹಾಜರಿದ್ದರು.
Comments are closed.