ಮಾಧ್ಯಮ ಟೀಕಿಸಿದರೆ ತಿದ್ದುವ ಗುಣವೆಂದು ಭಾವಿಸಿ: ಎಸ್ ಪಿಎಂ

ಸಾಹಿತ್ಯ ಸಾಧಕರಿಗೆ ಶಾಲಿನಿ ಪುರಸ್ಕಾರ 2023 ತುಮಕೂರು ವಾರ್ತೆ ಕ್ಯಾಲೆಂಡರ್ ಬಿಡುಗಡೆ

83

Get real time updates directly on you device, subscribe now.


ತುಮಕೂರು: ಪ್ರತಿಭೆಯನ್ನು ಹೆಕ್ಕಿ ತೆಗೆಯಬೇಕು. ಅದನ್ನು ಗುರುತಿಸಿ ಪ್ರೇರೇಪಣೆ ನೀಡಿದಾಗ ಅದು ಬೆಳವಣಿಗೆ ಹೊಂದಲಿದೆ. ಈ ರೀತಿಯಾಗಿ ಲೇಖಕರನ್ನು ಗೌರವಿಸುವ ಶಾಲಿನಿ ಪುರಸ್ಕಾರ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಹೇಳಿದರು.

ನಗರದ ತುಮಕೂರು ಕ್ಲಬ್ನಲ್ಲಿ ಆಯೋಜಿಸಿದ್ದ ‘ಶಾಲಿನಿ ಪುರಸ್ಕಾರ-2022’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬರವಣಿಗೆ ಮುಖಾಂತರ ಅಂಕುಡೊಂಕು ತಿದ್ದಬಹುದು. ಜನರನ್ನು ಬಡಿದೆಬ್ಬಿಸಬಹುದು. ರಾಜಕಾರಣಿಗಳ ಬಗ್ಗೆ ಪತ್ರಿಕೆಗಳು ಕಟುವಾಗಿ ಬರೆಯುತ್ತಾರೆ. ಅದನ್ನು ಸ್ವಾಗತಿಸಿ ಎಚ್ಚೆತ್ತುಕೊಳ್ಳಬೇಕು. ಅದು ನಮ್ಮನ್ನು ಎಚ್ಚರಿಸುವ ಕೆಲಸ, ಅದನ್ನು ನಾವು ಅರಿಯಬೇಕು. ಹೊಗಳಿಕೆ ಬೇಕಿಲ್ಲ. ಹೊಗಳುವವರು ಶತ್ರುಗಳು, ಟೀಕೆ ಮಾಡುವವರಿಂದ ನಾವು ತಿದ್ದಿ ನಡೆಯಬಹುದು ಎಂದರು.

ಸಾಹಿತಿಗಳಿಗೆ ಗೌರವಿಸುವ ಕೆಲಸ ಮಾಡಿರುವುದು ಉತ್ತಮ ಕಾರ್ಯ. ಅವರಿಂದ ಮತ್ತಷ್ಟು ಸಾಹಿತ್ಯ ಹೊರಬರಲಿ. ಯಾಂತ್ರಿಕ ಯುಗದಲ್ಲಿ ಓದುವುದು ಕಮ್ಮಿಯಾಗುತ್ತಿದೆ. ಇಂದು ಯುವ ಜನತೆ ಮೊಬೈಲ್ಗೆ ಅಂಟಿಕೊಂಡಿದ್ದಾರೆ. ನಮ್ಮ ತಾಳ್ಮೆ, ಜ್ಞಾನ ಕಳೆದು ಹೋಗ್ತಾ ಇದೆ. ಊಟ ಮಾಡಿಸುವಾಗಲು ಮಕ್ಕಳಿಗೆ ಮೊಬೈಲ್ ಕೊಡುತ್ತಿದ್ದಾರೆ. ಅದು ಕೆಟ್ಟ ಅಭ್ಯಾಸ, ಮಗುವಿಗೆ ಒಂದು ಅದ್ಬುತ ಕ್ಷಣಗಳು ಸಿಗದಂತಾಗಿದೆ. ಓದುವ ಅಭ್ಯಾಸವನ್ನು ಮಕ್ಕಳಿಗೆ ಪೋಷಕರು ರೂಢಿಸಿಕೊಳ್ಳಲಿ ಎಂದರು.

ಸ್ಪೂರ್ತಿ ಡೆವಲಪರ್ಸ್ನ ಎಸ್.ಪಿ.ಚಿದಾನಂದ್ ಮಾತನಾಡಿ, ಇಂದು ಹೃದಯ ಶ್ರೀಮಂತಿಕೆ ಕಳೆದುಕೊಳ್ಳುತ್ತಿದ್ದೇವೆ. ಹಣದ ಹಿಂದೆ ಬಿದ್ದಿದ್ದೇವೆ. ಮಾನವೀಯತೆ ಕಳೆದು ಹೋಗಿದೆ. ಹೃದಯವಂತಿಕೆ, ಮಾನವೀಯತೆ ಕಲಿಸುವ ಕಾರ್ಯವನ್ನು ಕವಿ, ಸಾಹಿತಿಗಳು ಮಾಡುತ್ತಿದ್ದಾರೆ. ನಮ್ಮನ್ನು ನಾವು ತಿದ್ದಿಕೊಳ್ಳುವ ಕೆಲಸ ಮಾಡಬೇಕು. ಆ ನಂತರ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು. ಮಕ್ಕಳಿಗೆ ದುಡಿಯುವ, ಕಾಯಕ ಮಾಡುವ ಬಗ್ಗೆ ತಿಳಿಸಬೇಕು ಎಂದರು.

ರಾಮನಿದ್ದ ಕಾಲದಲ್ಲಿ ರಾವಣನು ಇದ್ದ, ಒಳ್ಳೆಯವರ ಮಧ್ಯೆ ಕೆಟ್ಟವರು ಇರುತ್ತಾರೆ. ಸಮಾಜ ತಿದ್ದುವ ಕೆಲಸ ನಡೆಯಬೇಕು. ಯುವಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ಮಾತನಾಡಿ, ತುಮಕೂರು ವಾರ್ತೆ ಹೊರ ತಂದಿರುವ ಕ್ಯಾಲೆಂಡರ್ ದಿನಚರಿ ತಿಳಿಯಲು ಸಹಾಯಕವಾಗಿದೆ. ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಇನ್ನಷ್ಟು ನಡೆಯಲಿ ಎಂದರು.

ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ, ಕನ್ನಡ ಭಾಷೆ ಉಳಿಸುವ ನಿಟ್ಟನಿಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉದಯವಾಯಿತು. ಕನ್ನಡ ಭಾಷೆ ಉಳಿಸಿ ಬೆಳೆಸುವ ಕಾರ್ಯವನ್ನು ಕವಿ, ಸಾಹಿತಿಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು.
ನ್ಯಾಯಾಂಗ, ಶಾಸಕಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಶುದ್ಧಹಸ್ತರಾಗಿದ್ದವರು ಎಸ್.ಪಿ.ಮುದ್ದಹನುಮೇ ಗೌಡರು, ಅವರ ನಡೆ ಸಮಾಜಕ್ಕೆ ಮಾದರಿಯಾದುದು. ರಾಜಕಾರಣಿಗಳು ಸಮಾಜದಲ್ಲಿ ದೀಪ ಹಚ್ಚಬೇಕು. ಬೆಂಕಿ ಹಚ್ಚಬಾರದು, ಗಣ್ಯರನ್ನು ಆಹ್ವಾನಿಸಿ ಗೌರವಿಸಿರುವುದು ಉತ್ತಮ ಕಾರ್ಯ, ದೇವಪ್ರಕಾಶ್ ಹಲವಾರು ದತ್ತಿಪ್ರಶಸ್ತಿ ನೀಡುವ ಮೂಲಕ ಸಾರಸ್ವತ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಶತಾಯುಷಿ ಗುಬ್ಬಿ ಚನ್ನಬಸಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದ ಸರ್ಕಾರಕ್ಕೆ ಧಿಕ್ಕಾರ ಎಂದರು.

ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ರಾಜಕಾರಣಿಗಳಿಗೆ ಸಮಾಜ ಸೇವಾ ಗುಣವಿರಬೇಕು ಹಿಂದಿನ ಕಾಲದಲ್ಲಿ ಸಮಾಜಕ್ಕಾಗಿ ದುಡಿದವರೇ ರಾಜಕಾರಣಿಯಾಗಿ ಊರು ಅಭಿವೃದ್ಧಿ ಮಾಡುತ್ತಿದ್ದರು. ಈಗೀಗ ಸಾಕಷ್ಟು ಬದಲಾಗಿ ಜನ ಯಾರನ್ನ ನಂಬುವುದು ಎಂಬ ಪ್ರಶ್ನೆ ಎದುರಾಗಿದೆ ಎಂದರು.

ತುಮಕೂರು ವಾರ್ತೆ ಪತ್ರಿಕೆಯಲ್ಲಿ ಪ್ರಕಟವಾದ ಹಲವು ಸುದ್ದಿ ಸಾಕಷ್ಟು ಚರ್ಚೆಗೆ ಒಡ್ಡಿವೆ. ಮುದ್ರಣ ಮಾಧ್ಯಮ ನೈಜ ವರದಿ ಮೂಲಕ ಜನತೆಗೆ ಹತ್ತಿರವಾಗಿ ಸಮಾಜಮುಖಿಯಾಗಿ ದುಡಿಯುತ್ತಿದೆ. ಜೊತೆಗೆ ಸಾಹಿತ್ಯ ವಲಯಕ್ಕೂ ಆದ್ಯತೆ ನೀಡಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

2022ನೇ ಸಾಲಿನ ಶಾಲಿನ ಪುರಸ್ಕಾರಕ್ಕೆ ಭಾಜನರಾದ ಸಾಹಿತಿ ಎ.ವಿ.ಶ್ರೀಗಣೇಶ್ ಹಾಗೂ ಕವಯತ್ರಿ ಸಿದ್ಧಗಂಗಮ್ಮ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ಶಾಂತಕುಮಾರ್ ಹಾಗೂ ಆರ್.ಜಗದೀಶ್ ಬಾಬು ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಿಯಾ ಪ್ರದೀಪ್ ಹೊಸ ವರ್ಷ 2023ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಸಾಹಿತಿ ಕಮಲ ರಾಜೇಶ್, ಎಸ್.ಆರ್.ದೇವಪ್ರಕಾಶ್, ವಿದ್ಯಾವಾಹಿನಿ ಕಾಲೇಜಿನ ಪ್ರದೀಪ್ಕುಮಾರ್, ಶಾಲಿನಿ ದೇವಪ್ರಕಾಶ್, ತುಮಕೂರು ಕ್ಲಬ್ ಕಾರ್ಯದರ್ಶಿ ಸುಜ್ಞಾನ್ ಹಿರೇಮಠ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!