ಖಾಯಂ ಪಿಡಿಒ, ಕಾರ್ಯದರ್ಶಿ ನಿಯೋಜನೆ ಆಗ್ರಹ

84

Get real time updates directly on you device, subscribe now.


ಕುಣಿಗಲ್: ಖಾಯಂ ಪಿಡಿಒ ಹಾಗೂ ಕಾರ್ಯದರ್ಶಿ ನಿಯೋಜನೆ ಮಾಡುವಂತೆ ಆಗ್ರಹಿಸಿ ಹುತ್ರಿದುರ್ಗ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶನಿವಾರ ಹುತ್ರಿದುರ್ಗ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಜಮಾವಣೆಗೊಂಡ ಪ್ರಮುಖರಾದ ಶಿವಶಂಕರ್, ಧನಂಜಯ, ಕೇಶವಗೌಡ, ರಮೇಶ, ಲಿಂಗೇಗೌಡ, ಗಿರೀಶ, ಚಂದನ್, ಪ್ರಮೋದ್, ಚಂದ್ರಶೇಖರ್ ಇತರರು ಪ್ರತಿಭಟನೆ ನಡೆಸಿ ತಾಲೂಕು ಆಡಳಿತ ವಿರುದ್ಧ ಘೋಷಣೆ ಕೂಗಿದರು.

ಗ್ರಾಮಸ್ಥರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಾಪಂ ಇಒ ಜೋಸೆಫ್ ಅವರೊಂದಿಗೆ ವಾಗ್ವಾದ ನಡೆಸಿದ ಗ್ರಾಮಸ್ಥರು ಹುತ್ರಿದುರ್ಗ ಗ್ರಾಮಪಂಚಾಯಿತಿಗೆ ಕಳೆದ ಕೆಲವಾರು ತಿಂಗಳಿನಿಂದ ಮೂರಕ್ಕೂ ಹೆಚ್ಚು ಪಿಡಿಒಗಳು ಬದಲಾಗಿದ್ದಾರೆ. ಬಂದವರು ಯಾರು ಸಮರ್ಪಕ ಅವಧಿ ಪೂರ್ಣಗೊಳಿಸುವುದಿಲ್ಲ. ಹಾಲಿ ನಿಯೋಜಿಸಿರುವ ಪಿಡಿಒ ವಾರಕ್ಕೆ ಒಂದೆ ದಿನ ಬರುತ್ತಾರೆ. ಹೀಗಾದರೆ ಗ್ರಾಮದ ಕೆಲಸ ಕಾರ್ಯ ಹೇಗೆ ನಡೆಯುತ್ತದೆ. ಕಾರ್ಯದರ್ಶಿ ವರ್ಗಾವಣೆ ಮಾಡಿ ಮೂರು ತಿಂಗಳು ಕಳೆಯುತ್ತಾ ಬಂದರೂ ಕಾರ್ಯದರ್ಶಿ ಇಲ್ಲ. ಸರ್ಕಾರದ ಸವಲತ್ತು ಜನತೆಗೆ ಸಿಗುತ್ತಿಲ್ಲ. ಯೋಜನೆಗಳ ಬಗ್ಗೆ ಅರಿವು ಮೂಡುತ್ತಿಲ್ಲ. ಈ ರೀತಿ ಇದ್ದ ಮೇಲೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಏಕೆ ಬೇಕು, ಯಾವುದೇ ಅರ್ಜಿ ನೀಡಿದರೂ ಸರಿಯಾದ ಕ್ರಮವಾಗುತ್ತಿಲ್ಲ.

ಆಗಿರುವ ಕೆಲಸ ಕಾರ್ಯದ ಮಾಹಿತಿ ನೀಡುವುದಿಲ್ಲ. ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಹಾಕಿ ತಿಂಗಳುಗಟ್ಟಲೆ ಕಳೆದರೂ ಯಾರು ಸಮರ್ಪಕ ಉತ್ತರ ನೀಡುವುದಿಲ್ಲ. ಈದಿನ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿದು ಪಿಡಿಒ ಆತುರಾತುರವಾಗಿ ಬಂದಿದ್ದಾರೆ. ಪಿಡಿಒ ವಾರಕ್ಕೋಮ್ಮೆ ಬಂದರೆ ಕಾರ್ಯದರ್ಶಿ ಇಲ್ಲದೆ ಇದ್ದಮೇಲೆ ಜನರ ಪಾಡೇನು ಎಂದು ಪ್ರಶ್ನಿಸಿದರು.

ಗ್ರಾಮಸ್ಥರ ಮನವಿ ಆಲಿಸಿದ ತಾಪಂ ಇಒ ಜೋಸೆಫ್ ಸೋಮವಾರ ಈ ಬಗ್ಗೆ ಎರಡು ಸ್ಥಾನ ನಿಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈ ಬಿಟ್ಟ ಗ್ರಾಮಸ್ಥರು ಮುಂದಿನ ಬುಧವಾರದಂದು ಯಾವುದೇ ಕ್ರಮವಾಗದೆ ಇದ್ದಲ್ಲಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Get real time updates directly on you device, subscribe now.

Comments are closed.

error: Content is protected !!