ಶಿರಾದಲ್ಲಿ ವೈಭವದ ವೈಕುಂಠ ಏಕಾದಶಿ

78

Get real time updates directly on you device, subscribe now.


ಶಿರಾ: ವೈಕುಂಠ ಏಕಾದಶಿ ಅಂಗವಾಗಿ ಸೋಮವಾರ ನಗರದ ಶ್ರೀನಾರಾಯಣ ಸ್ವಾಮಿ ದೇವಸ್ಥಾನ, ಶ್ರೀಭಗವಾನ್ ಬಾಲಾಜಿ ದೇವಾಲಯ, ಶ್ರೀಪಾಂಡುರಂಗ ರುಕ್ಮಿಣಿ ದೇವಾಲಯ, ಶ್ರೀವಿದ್ಯಾಗಣಪತಿ ದೇವಾಲಯ ಹಾಗೂ ಗ್ರಾಮಾಂತರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾರ್ಚನೆ ನಡೆಸಲಾಗಿದೆ.

ನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ಬೆಳಗಿನ ಜಾವ 6 ಗಂಟೆಗೆ ಆರಂಭಗೊಂಡ ವಿಶೇಷ ಪೂಜೆ, ಅಲಂಕಾರದ ನಂತರ ಭಕ್ತಾದಿಗಳಿಗೆ ವೈಕುಂಠ ದ್ವಾರದ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಾವಿರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಇಲ್ಲಿನ ಶ್ರೀಭಗವಾನ್ ಬಾಲಾಜಿ ದೇವಾಲಯದಲ್ಲೂ ವಿಶೇಷ ಪೂಜೆ ಪ್ರಾಕಾರೋತ್ಸವ, ಮಂಗಳಾರತಿ ನಂತರ ವೈಕುಂಠದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ನಗರದ ಶ್ರೀಪಾಂಡುರಂಗ ರುಕ್ಮಿಣಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಪುಷ್ಪಾಲಂಕಾರ ಸಹಿತ ವೈಕುಂಠ ನಾರಾಯಣದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಗ್ರಾಮಾಂತರದಲ್ಲೂ ಪೂಜೆ: ಇಡೀ ರಾಜ್ಯಕ್ಕೇ ಅಪರೂಪವಾದ ಎರಡು ಕೈಯಲ್ಲೂ ಬೆಣ್ಣೆ ಮುದ್ದೆ ಹಿಡಿದು ನಿಂತಿರುವ ತಾಲ್ಲೂಕಿನ ಮೇಲ್ಕುಂಟೆ ಬಾಲಕೃಷ್ಣ ಸ್ವಾಮಿಯ ಸನ್ನಿಧಿಯಲ್ಲೂ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ವೈಕುಂಠ ದ್ವಾರದ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಶ್ರೀಕ್ಷೇತ್ರ ಮರಡಿಗುಡ್ಡದ ಶ್ರೀರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ವೈಕುಂಠ ಏಕಾದಶಿಯನ್ನು ವೈಭವದಿಂದ ಆಚರಿಸಲಾಗಿದೆ. ರತ್ನಸಂದ್ರ ಗ್ರಾಮದ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿಯೂ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಎಲ್ಲೆಡೆ ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು.

Get real time updates directly on you device, subscribe now.

Comments are closed.

error: Content is protected !!