ಜೈನರ ಪವಿತ್ರ ಕ್ಷೇತ್ರ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ

209

Get real time updates directly on you device, subscribe now.


ಕುಣಿಗಲ್: ಜೈನರ ಪವಿತ್ರ ಕ್ಷೇತ್ರವನ್ನು ಪ್ರವಾಸಿತಾಣವೆಂದು ಘೋಷಣೆ ಮಾಡಿರುವ ಜಾರ್ಖಂಡ್ ರಾಜ್ಯದ ಕ್ರಮ ಖಂಡಿಸಿ ಕುಣಿಗಲ್ ಪಟ್ಟಣದಲ್ಲಿ ಜೈನ ಬಾಂಧವರು ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿ ಜೈನ ಪವಿತ್ರ ಕ್ಷೇತ್ರವನ್ನು ಪವಿತ್ರ ತೀರ್ಥ ಕ್ಷೇತ್ರವನ್ನಾಗಿ ಉಳಿಸುವಂತೆ ಆಗ್ರಹಿಸಿದರು.

ಸೋಮವಾರ ಪಟ್ಟಣದ ತುಮಕೂರು ರಸ್ತೆಯ ಜೈನ ಮಂದಿರದ ಸಮೀಪ ಜೈನ ಸಮಾಜದ ಮುಖಂಡರಾದ ಮೋಹನ್ಕುಮಾರ್, ಸಂಸೋಶ್ಜಿ, ಮದನಕುಮಾರ್ ನೇತೃತ್ವದಲ್ಲಿ ಸಂಘಟಿತರಾದ ತಾಲೂಕು ಸೇರಿದಂತೆ ನೆರೆಯ ತಾಲೂಕಿನ ಮಾಯಸಂದ್ರ, ಸಂಕೀಘಟ್ಟದಿಂದ ಆಗಮಿಸಿದ ನೂರಾರು ಜೈನ ಭಾಂದವರು ಜಾರ್ಖಂಡ್ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕು ಕಚೇರಿವರೆಗೂ ಮೌನ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಿದರು.

ಈ ವೇಳೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಮುಖಂಡ ಸಂತೋಷ್ ಮಾತನಾಡಿ, ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನ ಧರ್ಮದ ಪರಮೋಚ್ಚ ಪವಿತ್ರ ತೀರ್ಥ ಕ್ಷೇತ್ರ ಸಮ್ಮೇದ ಶಿಖರ್ಜಿ ಜೈನ ಭಾಂದವರು ಶ್ರದ್ದಾ ಭಕ್ತಿ ಆಚರಣೆಯ ತಾಣವಾಗಿ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದೆ. 20 ತೀರ್ಥಂಕರರು ಮುಕ್ತಿ ಹೊಂದಿರುವ ಕ್ಷೇತ್ರವಾಗಿದೆ. ಜೈನ ಬಾಂಧವರ ಧಾರ್ಮಿಕ ಆಚರಣೆಯ ಸಂಕೇತವಾಗಿ ಕ್ಷೇತ್ರದ ದರ್ಶನ ಮಾಡಿದರೆ ಸಾಕು ಕಷ್ಟ, ಪಾಪ ಕಳೆದು ಹೋಗುತ್ತವೆ ಎಂಬ ಧೃಡವಾದ ನಂಬಿಕೆ ಇದೆ.

ಮೊಗಲರ ಕಾಲವೂ ಸೇರಿದಂತೆ ಈ ಭಾಗದಲ್ಲಿ ಆಳ್ವಿಕೆ ಮಾಡಿದ ಮಹಾನ್ ರಾಜರು ಸಹ ಕ್ಷೇತ್ರದ ಪಾವಿತ್ರತೆ ಹಾಗೂ ಜೈನ ಬಾಂಧವರ ಭಾವನೆಗಳ ಗೌರವಿಸಿ ಧಾರ್ಮಿಕ ಪುಣ್ಯ ಕ್ಷೇತ್ರವೆಂದು ಘೊಷಣೆ ಮಾಡಿ ಉಳಿಸಿಕೊಂಡು ಬಂದಿದ್ದಾರೆ. ಆದರೆ ಜಾರ್ಖಂಡ್ ರಾಜ್ಯ ಸರ್ಕಾರವು ಕ್ಷೇತ್ರದ ಇತಿಹಾಸ, ಧಾರ್ಮಿಕ ಶ್ರದ್ಧೆಯ ಬಗ್ಗೆ ಅವಲೋಕಿಸದೆ ಧಾರ್ಮಿಕ ಕ್ಷೇತ್ರವನ್ನು ಪ್ರವಾಸಿ ತಾಣ ಎಂದು ಘೋಷಿಸಿ ಜೈನ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. ಸಂವಿಧಾನದಲ್ಲಿ ಯಾವುದೇ ಧಾರ್ಮಿಕ ಭಾವನೆಗಳ ಕೆರಳಿಸುವ ಕೆಲಸವಾಗಬಾರದೆಂಬ ಉಲ್ಲೇಖ ಇದೆ. ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಾಗಿರುವ ಜೈನ ಬಾಂಧವರ ಧಾರ್ಮಿಕ ಭಾವನೆಗೆ ಚ್ಯುತಿ ತರಲು ಜಾರ್ಖಂಡ್ ಸರ್ಕಾರದ ಮುಂದಾಗಿದ್ದು, ಸರ್ಕಾರದ ನಡೆ ರದ್ದುಗೊಳಿಸಿ ಸಮ್ಮೇದ ಮುಖರ್ಜಿ ಸ್ಥಾನದ ಧಾರ್ಮಿಕ ಪಾವಿತ್ರತೆ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್ ಯೋಗೇಶ್ ಅವರಿಗೆ ಮನವಿ ಸಲ್ಲಿಸಿ ಕೇಂದ್ರ ಹಾಗೂ ಜಾರ್ಖಂಡ್ ಸರ್ಕಾರ ಈ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಮುಖರಾದ ರೂಪ, ಪಾರ್ಶ್ವನಾಥ, ಜ್ವಾಲಾಪ್ರಸಾದ್, ನಿರ್ಮಲ್ಕುಮಾರ, ಮಂಜುನಾಥ, ನೀರಜ, ಶಾಂತರಾಜಯ್ಯ, ಸುರೇಂದ್ರ ಕುಮಾರ, ಪ್ರಥಮ್, ಮಹಾವೀರ, ನಿಖಿಲ್ಜೈನ್, ನಾಗರಾಜಯ್ಯ, ರತ್ನಕರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!