ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023ರ ಅಂಗವಾಗಿ ಇಂದು ಜಾಗೃತಿ ನಡಿಗೆಯನ್ನು ಹಮ್ಮಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಜಾಗೃತಿ ನಡಿಗೆಗೆ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ವಿಶ್ವಸಂಸ್ಥೆಯು 2023ನೇ ಇಸವಿಯನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದ್ದು, ಸರ್ಕಾರವು ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅದರ ಉಪಕ್ರಮವಾಗಿ ಇಂದು ಜಾಗೃತಿ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಜೋಳ, ಬಾರ್ಲಿ, ನವಣೆ, ಸಾಮೆ, ಬಿಳಿ ಜೋಳ, ಸಜ್ಜೆ, ರಾಗಿ, ಬರಗು, ಹರಕ, ಊದಲು ಇವೆಲ್ಲ ಸಿರಿ ಧಾನ್ಯಗಳಾಗಿದ್ದು, ಇದರ ಮಹತ್ವವನ್ನು ಎಲ್ಲರೂ ಅರಿಯಬೇಕು. ಭವಿಷ್ಯದಲ್ಲಿ ಸಂಘರ್ಷಗಳು ನಡೆದರೆ ಅದಕ್ಕೆ ನೀರು ಕಾರಣವಾಗಬಹುದು. ಸಿರಿಧಾನ್ಯಗಳಿಗೆ ಕಡಿಮೆ ನೀರು ಇದ್ದರೂ ಸಾಕು ಸೊಂಪಾಗಿ ಬೆಳೆದು ಫಲ ನೀಡುತ್ತವೆ ಎಂದು ತಿಳಿಸಿದರು.
ಸಿರಿಧಾನ್ಯಗಳು ಹವಾಮಾನ ವ್ಯೆಪ್ಯರೀತ್ಯಕ್ಕೆ ಒಗ್ಗುವ ಮತ್ತು ಬರ ನಿರೋಧಕ ಗುಣಗಳನ್ನು ಹೊಂದಿದ್ದು, ಸಮತೋಲಿತ ಪೌಷ್ಟಿಕಾಂಶದ ಸಮೃದ್ಧ ಮೂಲವಾಗಿದೆ. ಇವು ಈ ನೆಲದ ಧಾನ್ಯಗಳಾಗಿದ್ದು ಇಂದು ಜಗತ್ತಿನ ಭವಿಷ್ಯಯದ ಆಹಾರದ ಆಯ್ಕೆಯಾಗುತ್ತಿವೆ. ನಾವು ಈ ಮಣ್ಣಿನ ಮಕ್ಕಳಾಗಿ ಬೇರೆ ಪ್ರದೇಶದ ಆಹಾರ ಧಾನ್ಯಗಳ ಬಳಕೆ ಕಡಿಮೆ ಮಾಡಿ, ಸಿರಿಧಾನ್ಯಗಳನ್ನು ತಮ್ಮ ಆಹಾರದ ಒಂದು ಭಾಗವನ್ನಾಗಿ ಹೆಚ್ಚು ಬಳಸಿ ಆರೋಗ್ಯ ವೃದ್ದಿಸಿಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ವಿಶ್ವಸಂಸ್ಥೆಯು ಗೊತ್ತುಪಡಿಸಿದ 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ಆಚರಿಸುವ ಪ್ರಯತ್ನದ ಭಾಗವಾಗಿ ಸಾರ್ವಜನಿಕರಲ್ಲಿ ಅದರ ಬಳಕೆಯನ್ನು ಹೆಚ್ಚಿಸುವ ಮೂಲಕ ಬೆಳೆಯನ್ನು ಉತ್ತೇಜಿಸಲು ಸರ್ಕಾರ ಯೋಜಿಸಿದ್ದು, ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಳಕೆಯ ವಿಶೇಷ ಅರಿವು ಮೂಡಿಸುವುದು ಮತ್ತು ರೈತರಿಗೆ ಉತ್ತಮ ಆದಾಯವನ್ನು ಪಡೆಯಲು ಸಹಾಯ ಮಾಡುವುದು ಕೂಡ ಇದರ ಉದ್ದೇಶವಾಗಿದ್ದು, ಜಿಲ್ಲೆಯಲ್ಲಿ ರೈತರು ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವಂತೆ ಕರೆ ನೀಡಿದರು.
ಜಾಥಾವು ಜಿಲ್ಲಾಧಿಕಾರಿಗಳ ಕಛೇರಿಯಿಂದ ಹೊರಟು, ಚರ್ಚ್ ಸರ್ಕಲ್, ಅಶೋಕ ರಸ್ತೆ ಮೂಲಕ ಜೂನಿಯರ್ ಕಾಲೇಜು ಮೈದಾನ ತಲುಪಿತು. ಈ ಸಂಧರ್ಭದಲ್ಲಿ ಸಿರಿಧಾನ್ಯಗಳ ಬಳಕೆ ಕುರಿತು ಅರಿವು ಮೂಡಿಸಲಾಯಿತು.
ಕೃಷಿ ಇಲಾಖೆಯ ಜಂಟಿ ನಿದೇಶಕ ಕೆ.ಹೆಚ್.ರವಿ, ಉಪನಿದೇಶಕರಾದ ಅಶೋಕ್, ದೀಪಶ್ರೀ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಜಿಲ್ಲಾ ಪಶು ಸಂಗೋಪನ ಇಲಾಖೆಯ ಉಪ ನಿರ್ದೇಶಕ ಡಾ. ಜಯಣ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ತಹಸೀಲ್ದಾರ್ ಸಿದ್ದೇಶ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ, ವಿವಿಧ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮೊದಲಾದವರು ವಾಕಥಾನ್ದಲ್ಲಿ ಪಾಲ್ಗೊಂಡಿದ್ದರು.
Comments are closed.