ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ

ಬಾಕಿ ಪ್ರಕರಣಗಳ ತ್ವರಿತವಾಗಿ ಇತ್ಯರ್ಥಪಡಿಸಿ: ಡೀಸಿ ವೈ.ಎಸ್. ಪಾಟೀಲ್

191

Get real time updates directly on you device, subscribe now.


ತುಮಕೂರು: 94ಸಿ ಹಾಗೂ 94ಸಿಸಿಯಡಿ ಬಾಕಿ ಉಳಿದಿರುವ ಪ್ರಕರಣಗಳ ತ್ವರಿತವಾಗಿ ಇತ್ಯರ್ಥಪಡಿಸಿ, ಹಕ್ಕುಪತ್ರ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ನಡೆದ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಮಾರ್ಗಸೂಚಿ ಅನುಸಾರ 94ಸಿ ಹಾಗೂ 94ಸಿಸಿ ಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ಬಾಕಿ ಇರಿಸದೆ, ಶೀಘ್ರ ವಿಲೇವಾರಿಗೆ ತಕ್ಷಣ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಸಂಬಂಭಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚನೆ ನೀಡಿದರು.

ಜಿಲ್ಲೆಯ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಿ, ನೆಲೆ ಕಲ್ಪಿಸಿ ಸರ್ಕಾರದ ದಾಖಲೆಗಳನ್ನು ನೀಡಲಾಗುತ್ತದೆ. ಫಲಾನುಭವಿಯ ಕೈಗೆ ಹಕ್ಕು ಪತ್ರ ಸಿಕ್ಕಿದರೆ ಆ ಜಾಗದ ಮಾಲೀಕ ಅವರಾಗುತ್ತಾರೆ. ಈ ಮೂಲಕ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ಸರಕಾರದ ಎಲ್ಲಾ ಸವಲತ್ತು ದೊರಕಲಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಕಂದಾಯ ಸಮಸ್ಯೆಗಳಿದ್ದಲ್ಲಿ ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ವರದಿ ನೀಡಬೇಕು. ಪಹಣಿ ಇಂದೀಕರಣ, ಬಗರ್ ಹುಕುಂ, ಅಕ್ರಮ ಸಕ್ರಮ ಯೋಜನೆಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜೆಇ ಲಸಿಕಾಕರಣ ಶೇ.100 ರಷ್ಟು ಲಸಿಕಾಕರಣ ಗುರಿ ಸಾಧಿಸಲು ಡಿಡಿಪಿಐಗಳು ಬಿಇಓ ಮೂಲಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಸಿಡಿಪಿಓಗಳ ಮೂಲಕ ತಮ್ಮ ವ್ಯಾಪ್ತಿಯ ಎಲ್ಲಾ ಮಕ್ಕಳಿಗೆ ಜೆಇ ಲಸಿಕಾ ಹಾಕಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದರು. ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಸಾರ್ವಜನಿಕರು ಸಲ್ಲಿಸುವ ಅರ್ಜಿಯನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಸರಕಾರವು ಪ್ರತಿಯೊಬ್ಬನ ಆಶೋತ್ತರವನ್ನು ಈಡೇರಿಸಲು ಅನೇಕ ಯೋಜನೆ ಜಾರಿಗೆ ತಂದಿದ್ದು, ಮನೆ ನಿರ್ಮಿಸಲು ಸರ್ಕಾರ ನೀಡುವ ಅನುದಾನ ಸದ್ಬಳಕೆಯಾಗುವ ಬಗ್ಗೆ ನಿಗಾವಹಿಸಬೇಕು ಎಂದರು.

ಸಭೆಯಲ್ಲಿ ಮನೆ ಹಾಗೂ ಜೀವ ಹಾನಿ ಪ್ರಕರಗಳ ಪೈಕಿ ಪಹಣಿ ಒಟ್ಟುಗೂಡಿಸುವಿಕೆ ಪ್ರಗತಿ, ಪಹಣಿ ಕಾಲಂ 3 ಮತ್ತು 9 ಹೊಂದಾಣಿಕೆ, ಭೂಮಿ ಪೆಂಡೆನ್ಸಿ, ನಮೂನೆ 1, 5 ಸಿದ್ಧಪಡಿಸುವ ಬಗ್ಗೆ, ಕಂದಾಯ ಗ್ರಾಮಗಳ ರಚನೆ ಪ್ರಗತಿ ಪರಿಶೀಲನೆ, ನಮೂನೆ 50, 53 ವಿಲೇವಾರಿ ಹಾಗೂ ನಮೂನೆ 57 ಗಣಕೀಕರಣ, ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರಿ ಜಮೀನು ಕಾಯ್ದಿರಿಸುವ ಬಗ್ಗೆ, ಸಾಮಾಜಿಕ ಭದ್ರತಾ ಯೋಜನೆ, ಸಕಾಲ ಹಾಗೂ ನಾಡಕಚೇರಿ ವಿಷಯಗಳು, ಕೆರೆ ಅಭಿವೃದ್ಧಿ ಮತ್ತು ಒತ್ತುವರಿ ಮೊದಲಾದ ವಿಷಯಗಳ ಪ್ರಗತಿ ಪರಿಶೀಲನೆ ನಡೆಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಡಿ.ಎನ್, ಜಿಲ್ಲಾ ಸರ್ಜನ್ ಡಾ.ವೀಣಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಭೂಮಾಪನಾ ಇಲಾಖೆಯ ಉಪ ನಿರ್ದೇಶಕ ಸುಜಯ್, ವಿಶೇಷ ಭೂಸ್ವಾಧೀನಾಧೀಕಾರಿಗಳು, ಎಲ್ಲಾ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರ್ಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ವೈದ್ಯಾಧಿಕಾರಿಗಳು, ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಗಳು, ಎಲ್ಲಾ ನಗರ ಸಭೆ, ಪಟ್ಟಣ ಪಂಚಾಯತಿಗಳ ಆಯುಕ್ತರು, ಮುಖ್ಯಾಧಿಕಾರಿಗಳ ಸೇರಿದಂತೆ ಸಂಬಂಧಿಸಿದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!