ಅದ್ದೂರಿ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

ಸಕಲ ಸಿದ್ಧತೆಕೈಗೊಳ್ಳಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಸಿಇಒ ಸೂಚನೆ

183

Get real time updates directly on you device, subscribe now.


ತುಮಕೂರು: ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜನವರಿ 26 ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನವರಿ 26ರ ಗಣರಾಜ್ಯೋತ್ಸವದಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಧ್ವಾಜಾರೋಹಣ ಮಾಡುವ ಸ್ಥಳದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಗಣರಾಜ್ಯೋತ್ಸವವನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳನ್ನು ಒಳಗೊಂಡ ಸ್ವಾಗತ, ಪರೇಡ್, ಕ್ರೀಡಾಂಗಣ ಸಮಿತಿ ಸೇರಿದಂತೆ ಆಯ್ಕೆ ಸಮಿತಿ, ಸಿಹಿ ತಿಂಡಿ ವಿತರಣೆ ಸಮಿತಿ ರಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ ಕಾರ್ಯೋನ್ಮುಖರಾಗಲು ನಿರ್ದೇಶನ ನೀಡಿದರು.

ಕಾರ್ಯಕ್ರಮದಲ್ಲಿ ಎನ್ಸಿಸಿ, ಅಗ್ನಿಶಾಮಕ, ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಅರಣ್ಯ ಇಲಾಖೆ, ಗೃಹ ರಕ್ಷಕದಳದವರಿಂದ ಆಕರ್ಷಕ ಕವಾಯತು ಏರ್ಪಡಿಸಬೇಕು. ಕವಾಯತಿಗಾಗಿ ತಾಲೀಮು ನಡೆಸಲು ಅನುವಾಗುವಂತೆ ಧೂಳು ಬಾರದ ರೀತಿಯಲ್ಲಿ ನೀರು ಸಿಂಪಡಿಸಿ ಮೈದಾನವನ್ನು ಅಣಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಕಳೆದ ವರ್ಷದಲ್ಲಿ ಕೋವಿಡ್ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬೆಳಗ್ಗೆ ಹಾಗೂ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸಂಜೆ 4.30 ರಿಂದ ಸಂಜೆ 6.30 ಗಂಟೆವರೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಅವರಿಗೆ ನಿರ್ದೇಶನ ನೀಡಿದರು.

ವೇದಿಕೆ ನಿರ್ಮಾಣ, ಬ್ಯಾರಿಕೇಡ್, ಬ್ಯಾಕ್ ಡ್ರಾಪ್, ಧ್ವಜ ಸ್ತಂಭ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆಗೆ ಹಾಗೂ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಮಹಾ ನಗರ ಪಾಲಿಕೆಗೆ ನಿರ್ದೇಶನ ನೀಡಿದರಲ್ಲದೆ, ವೇದಿಕೆ ಸುತ್ತಮುತ್ತ ಹೂಕುಂಡಗಳಿಂದ ಅಲಂಕರಿಸಬೇಕೆಂದು ತೋಟಗಾರಿಕೆ ಇಲಾಖೆಗೆ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಲು ಬೆಸ್ಕಾಂ ಇಲಾಖೆಗೆ ಸೂಚಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಜನವರಿ 25 ಹಾಗೂ 26 ರಂದು ನಗರದ ಟೌನ್ಹಾಲ್ ವೃತ್ತ, ಚರ್ಚ್ ಸರ್ಕಲ್, ಲಕ್ಕಪ್ಪ ಸರ್ಕಲ್, ಕೋಟೆ ಶ್ರೀಆಂಜನೇಯ ಸರ್ಕಲ್, ಎಸ್ಬಿಎಂ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಅಲಂಕರಿಸಬೇಕು. ದಿನಾಚರಣೆ ಅಂಗವಾಗಿ ತಾಲೀಮು ಹಾಗೂ ಇನ್ನಿತರೆ ಕಾರ್ಯಕ್ರಮ ನಡೆಯುವುದರಿಂದ ಜ.25 ಹಾಗೂ 26 ರಂದು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳಿಗೆ ತಲುಪಿಸಬೇಕು. ಯಾವುದೇ ರೀತಿ ಚ್ಯುತಿ ಬಾರದಂತೆ ಅಚ್ಚುಕಟ್ಟಾಗಿ ಗಣರಾಜ್ಯೋತ್ಸವ ಜರುಗುವಂತೆ ಅಧಿಕಾರಿಗಳು ಶ್ರದ್ಧೆಯಿಂದ ನಮ್ಮ ಮನೆಯ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ ಅವರು ರಾಷ್ಟ್ರೀಯ ಹಬ್ಬಕ್ಕೆ ಎಲ್ಲ ಅಧಿಕಾರಿ, ಸಿಬ್ಬಂದಿ ತಪ್ಪದೆ ಹಾಜರಾಗಬೇಕು. ಗೈರು ಹಾಜರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿ ನಿಯಮದನ್ವಯ ಧ್ವಜಾರೋಹಣ ನೆರವೇರಿಸಬೇಕು. ಹರಿದ, ಹಳೆಯ ಧ್ವಜಗಳನ್ನು ಹಾರಿಸಬಾರದು ಎಂದು ನಿರ್ದೇಶಿಸಿದರು. ನಂತರ ಸಭೆಯಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಸನ್ಮಾನಿಸಿ ಗೌರವಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಪಾಲಿಕೆ ಆಯುಕ್ತ ಯೋಗಾನಂದ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗೋಪಾಲ್ ಜಾದವ್, ಕಾರ್ಮಿಕ ಅಧಿಕಾರಿ ಹೆಚ್.ಎನ್.ರಮೇಶ್, ನಿರ್ಮಿತಿ ಕೇಂದ್ರದ ರಾಜಶೇಖರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸರೋಜಮ್ಮ, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಜಯಣ್ಣ, ಯುವ ಸಬಲೀಕರಣ ಇಲಾಖೆ ಸಹಾಯಕ ನಿದೇಶಕ ನಾಗರಾಜು, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!