ಯುವ ಜನತೆ ಕಡ್ಡಾಯವಾಗಿ ಮತ ಹಕ್ಕು ಚಲಾಯಿಸಲಿ

79

Get real time updates directly on you device, subscribe now.


ತುಮಕೂರು: ಸುಸ್ಥಿರ ಸಮಾಜ ರೂಪಿಸುವಲ್ಲಿ ಮತ್ತು ದೇಶದ ಪ್ರಜಾ ಪ್ರಭುತ್ವ ಉಳಿಸಿ, ಬೆಳೆಸುವಲ್ಲಿ ಇಂದಿನ ಯುವ ಸಮೂಹದ ಪಾತ್ರ ಬಹುಮುಖ್ಯವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ಯುವಕ- ಯುವತಿಯರು ಮತದಾನದಂತಹ ಮಹತ್ತರ ಜವಬ್ದಾರಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗದ ತುಮಕೂರು ಜಿಲ್ಲೆ ಪ್ರಾದೇಶಿಕ ಕಮೀಷನರ್ ಹಾಗೂ ಎಲೆಕ್ಷನ್ ತಹಸೀಲ್ದಾರ್ ನಾಗಭೂಷಣ್ ತಿಳಿಸಿದರು.

ನಗರದ ಪ್ರತಿಷ್ಠಿತ ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ತುಮಕೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಯುವ ವಿದ್ಯಾರ್ಥಿಗಳಿಗೆ ಮತದಾನದ ಅರಿವು ಹಾಗೂ ಹೊಸದಾಗಿ ಮತಪಟ್ಟಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತಾನಾಡಿ, ತುಮಕೂರು ಜಿಲ್ಲೆಯಲ್ಲಿ ಸರಿ ಸುಮಾರು 95,071 ಯುವ ವಿದ್ಯಾರ್ಥಿಗಳು ಮತದಾನ ಮಾಡುವ ಹಕ್ಕನ್ನು ಹೊಂದಿದ್ದು, ಅದರಲ್ಲಿ ಇದುವರೆವಿಗೂ ಕೇವಲ 34628 ಯುವಕ- ಯುವತಿಯರು ಮಾತ್ರ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುತ್ತಾರೆ. ಇನ್ನುಳಿದ ಎಲ್ಲರೂ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹೊತ್ತಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕೆಂದು ಕರೆ ನೀಡಿದರು.

ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್. ಬಿ.ಪ್ರದೀಪ್ ಕುಮಾರ್ ಮಾತನಾಡಿ, ಉತ್ತಮ ಸಮಾಜ ಹಾಗೂ ಸದೃಡ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮತದಾನ ಪ್ರಬಲ ಅಸ್ತ್ರವಾಗಿದ್ದು, ಯಾವುದೇ ಯುವ ಸಮೂಹ ಮತದಾನದಿಂದ ಹೊರಗುಳಿಯಬಾರದು. ನಿರ್ಭೀತಿಯಿಂದ, ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಭಾರತದ ಚುನಾವಣಾ ಆಯೋಗ ಮೊಬೈಲ್ ಅಪ್ಲಿಕೇಶನ್ ಮುಖಾಂತರವೇ ಯುವ ವಿದ್ಯಾರ್ಥಿಗಳಿಗೆ ಮತಪಟ್ಟಿಗೆ ಸೇರ್ಪಡೆ ಆಗಲು ಉತ್ತಮ ಅವಕಾಶ ಕಲ್ಪಿಸಿದೆ. ಪ್ರಸ್ತುತ ನಮ್ಮ ದೇಶ ಡಿಜಿಟಲ್ ತಾಂತ್ರಿಕತೆಯತ್ತ ಮುನ್ನೆಡೆಯುತ್ತಿರುವುದಕ್ಕೆ ಇದು ಸೂಕ್ತ ಉದಾಹರಣೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಸುಮಾರು 2000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರ್ಯಾತಿಕ್ಷಿಕೆಯ ಮೂಲಕ ಹೊಸ ಮತದಾರರ ಪಟ್ಟಿಗೆ ಹೇಗೆ ಸೇರುವುದು, ಅವಶ್ಯವಿರುವ ದಾಖಲಾತಿಗಳು ಯಾವುವು, ಇನ್ನಿತರ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
ಮೊಬೈಲ್ನಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ ವಿಹೆಚ್ಎ (ವೋಟರ್ ಹೆಲ್ಪ್ಲೈನ್ ಆ್ಯಪ್) ಡೌನ್ಲೋಡ್ ಮಾಡಿಕೊಂಡು, ತದನಂತರ ವಿವರಗಳನ್ನು ನಮೂದಿಸಿ, ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದಾಗಿದೆ. ಒಂದು ಮೊಬೈಲ್ ಸಂಖ್ಯೆಯಿಂದ ಸುಮಾರು 6 ಜನ ಮತಪಟ್ಟಿಗೆ ಸೇರಬಹುದಾಗಿದೆ.

ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆಯ ರೆವಿನ್ಯೂ ಅಧಿಕಾರಗಳಾದ ಶೇಖರ್ ಬಾಬು, ನಂದೀಶ್, ಜಯದೇವ, ಮತದಾನ ಅಧಿಕಾರಿಗಳಾದ ರಾಘವೇಂದ್ರ, ಮಹಾದೇವ್, ತಿಪ್ಪೇಶ್, ಕಾಲೇಜಿನ ಪ್ರಾಂಶುಪಾಲ ಆನಂದ್ ಪಾಟೀಲ್, ಉಪ ಪ್ರಾಂಶುಪಾಲ ಪ್ರಶಾಂತ್ ಕುಮಾರ್, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವೃಂದ ಇದ್ದರು.

Get real time updates directly on you device, subscribe now.

Comments are closed.

error: Content is protected !!