ಮಧುಗಿರಿ: ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 86 ಮಂದಿಗೆ 200 ಎಕರೆ ಜಮೀನಿನ ಬಗರ್ ಹುಕುಂ ಸಾಗುವಳಿ ಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಸಾಗುವಳಿ ಪತ್ರ ವಿತರಿಸಿ ಮಾತನಾಡಿ, ರೈತರಿಗೆ ಭದ್ರತೆ ಒದಗಿಸಬೇಕಾಗಿದೆ. ಜಮೀನು ಭದ್ರತೆ ತಂದುಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಪತ್ರ ವಿತರಿಸಲಾಗಿದೆ. ಬಗರ್ ಹುಕುಂ ಕಮಿಟಿ ರಚನೆಯಲ್ಲಿ ಭಾಜಪ ಸರ್ಕಾರ ವಿಳಂಬ ಮಾಡಿ ನಂತರ ಅಸಹಕಾರ ಭಾವನೆಯಿಂದ ಕಮಿಟಿ ರಚಿಸಿದ್ದು ಮುಂದಿನ ದಿನಗಳಲ್ಲಿ ನೂರಕ್ಕೂ ಹೆಚ್ಚು ರೈತರಿಗೆ ಸಾಗುವಳಿ ಪತ್ರ ವಿತರಿಸಲಾಗುತ್ತದೆ. ಮಧುಗಿರಿ ಉಪ ವಿಭಾಗ ಹಳೆಯ ಉಪಯೋಗವಾಗಿದ್ದು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಹೊಂದಿದೆ. ಇದೇ ಅಲ್ಲದೆ ವಿಭಾಗದ ನಾಲ್ಕು ತಾಲೂಕುಗಳು ಬರಗಾಲ ಪೀಡಿತ ಮತ್ತು ಹಿಂದುಳಿದ ತಾಲೂಕುಗಳಾಗಿದ್ದು ಈ ತಾಲೂಕುಗಳ ಅಭಿವೃದ್ಧಿಗಾಗಿ ಜಿಲ್ಲಾ ಕೇಂದ್ರವಾಗುವ ಅವಶ್ಯಕತೆ ಇದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಜಿಲ್ಲಾ ಕೇಂದ್ರ ಮಾಡುವುದು ಶತಸಿದ್ಧ ಎಂದರು.
ತಹಸೀಲ್ದಾರ್ ಸುರೇಶ್ ಆಚಾರ್ ಮಾತನಾಡಿ, ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡುತ್ತಿದ್ದು, ಇಷ್ಟಕ್ಕೆ ಸುಮ್ಮನಾಗದೆ ನಿಮ್ಮ ಜಮೀನಿನ ಪಹಣಿ, ಭೂ ದಾಖಲೆಗಳನ್ನು ಸಿದ್ಧಮಾಡಿಸಿಕೊಳ್ಳಬೇಕು ಎಂದರು.
ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸುಮಾರು 30- 40 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೆ ಭೂಮಿಯನ್ನು ಅವರ ಹೆಸರಿಗೆ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡುತ್ತಿದ್ದು ಈ ಕುಟುಂಬಗಳು ಶಾಸಕರನ್ನು ಮರೆಯಬಾರದು ಎಂದರು.
ಪುರಸಭಾ ಸದಸ್ಯರಾದ ಎಂ.ಆರ್.ಜಗನ್ನಾಥ್, ಎಂಎಲ್ ಗಂಗರಾಜು, ನಾರಾಯಣ್, ತಹಶೀಲ್ದಾರ್ ಸುರೇಶ ಆಚಾರ್, ಮುಖಂಡರಾದ ವೆಂಕಟಾಪುರ ಗೋವಿಂದರಾಜು, ತುಂಗೋಟಿ ರಾಮಣ್ಣ, ಪುರಸಭಾ ಅಧ್ಯಕ್ಷ ತಿಮ್ಮರಾಜು, ಕಂದಾಯಾಧಿಕಾರಿಗಳು, ರೈತರು ಹಾಜರಿದ್ದರು.
Comments are closed.