ಕಾರ್ಮಿಕರ ಆರೋಗ್ಯ ರಕ್ಷಣೆಗೆ ಆದ್ಯತೆ

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇಎಸ್ಐ ಚಿಕಿತ್ಸಾಲಯ ಆರಂಭ

108

Get real time updates directly on you device, subscribe now.


ತುಮಕೂರು: ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಹೊರ ಹೊಮ್ಮುತ್ತಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ರಾಜ್ಯದ 118ನೇ ಇಎಸ್ಐ ಚಿಕಿತ್ಸಾಲಯ ತೆರೆಯುವ ಮೂಲಕ ಕೈಗಾರಿಕೆಗಳ ಜೀವಾಳವಾಗಿರುವ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ.ಎನ್.ಜಿ.ರವಿಕುಮಾರ್ ತಿಳಿಸಿದ್ದಾರೆ.

ನಗರದ ವಸಂತನರಸಾಪುರ ಮೊದಲ ಹಂತದ ಕೈಗಾರಿಕಾ ಪ್ರದೇಶ ಸೈಟ್ ಸಂಖ್ಯೆ 230-231ರಲ್ಲಿ ಇಎಸ್ಐ ಚಿಕಿತ್ಸಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಸದರಿ ಆಸ್ಪತ್ರೆಯಲ್ಲಿ ಮೊದಲ ಹಂತದ ಚಿಕಿತ್ಸೆ ದೊರೆಯಲಿದ್ದು, ಅತ್ಯಂತ ಗಂಭೀರ ಪ್ರಕರಣ ಕಂಡು ಬಂದರೆ ಈಗಾಗಲೇ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಸಿದ್ದಾರ್ಥ, ಸಿದ್ದಗಂಗಾ ಮತ್ತು ಶ್ರೀದೇವಿ ಮೆಡಿಕಲ್ ಕಾಲೇಜುಗಳಿಗೆ ಹೆಚ್ಚಿನ ಚಿಕಿತ್ಸೆಗೆ ರೆಫರ್ ಮಾಡಲಾಗುವುದು ಎಂದರು.

ಈ ಹಿಂದೆ ಮಾತೃ, ಪಿತೃ, ಗುರುಗಳನ್ನು ದೈವ ಸಮಾನ ಎಂದು ಹೇಳಲಾಗುತ್ತಿತ್ತು. ಇಂದು ಅವರ ಜೊತೆಗೆ ಅನ್ನ ನೀಡುವ ರೈತ, ವೈದ್ಯರು, ಗಡಿ ಕಾಯುವ ಯೋಧ ಹಾಗೆಯೇ, ತನ್ನ ಬೆವರಿನ ಮೂಲಕ ಕೈಗಾರಿಕೆಗಳಿಗೆ ಶಕ್ತಿ ತುಂಬಿ ಕಾರ್ಮಿಕರನ್ನು ಈ ಸಾಲಿನಲ್ಲಿ ಕಾಣಬೇಕಾಗಿದೆ. ಎಷ್ಟೇ ತಾಂತ್ರಿಕತೆ ಬೆಳೆದರೂ ಕಾರ್ಮಿಕನಿಲ್ಲದ ಕೈಗಾರಿಕೆ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಕಾರ್ಮಿಕ ದೇವೋಭವ ಎನ್ನುವ ಕಾಲ ಇದಾಗಿದೆ. ವಸಂತನರಸಾ ಪುರ ಕರಾವೇ ಚಿಕಿತ್ಸಾಲಯದಲ್ಲಿ 21 ಸಾವಿರ ಕಾರ್ಮಿಕರಿಗೆ ಚಿಕಿತ್ಸೆ ದೊರೆಯಲಿದೆ ಎಂದು ರವಿಕುಮಾರ್ ತಿಳಿಸಿದರು.

ದೇಶದ ಜನರಿಗಾಗಿ ಕಷ್ಟ ಪಟ್ಟು ದುಡಿಯುವ ಕಾರ್ಮಿಕನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಸರಕಾರ 1948ರಲ್ಲಿ ಕಾರ್ಮಿಕರ ವಿಮಾ ಕಾಯ್ದೆ ಜಾರಿಗೆ ತಂದಿತ್ತು. ಹಲವಾರು ಸೌಲಭ್ಯಗಳ ಜೊತೆಗೆ ವೈದ್ಯಕೀಯ ಸೌಲಭ್ಯ ಒದಗಿಸಿದೆ. 1958ರಲ್ಲಿ ಪ್ರಥಮವಾಗಿ ರಾಜ್ಯದಲ್ಲಿ 12 ಇಎಸ್ಐ ಚಿಕಿತ್ಸಾಲಯ ಆರಂಭಿಸಲಾಯಿತು. ಇಂದು ಕರ್ನಾಟಕದಲ್ಲಿ 113 ಇಎಸ್ಐ ಚಕಿತ್ಸಾಲಯ, 10 ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ಹೊಸದಾಗಿ 19 ಹೊಸ ಚಿಕಿತ್ಸಾಲಯ ಪ್ರಾರಂಭಿಸಲು ನಿರ್ಧರಿಸಿದ್ದರು. ರಾಣಿಬೆನ್ನೂರು, ಶಿರಸಿ, ಮುದೋಳ, ಕೋಲಾರದಲ್ಲಿ ಈಗಾಗಲೇ ಹೊಸ ಚಿಕಿತ್ಸಾಲಯ ಆರಂಭಗೊಂಡಿದೆ. ಇದೇ ಕೈಗಾರಿಕಾ ಪ್ರದೇಶದ ಐದು ಎಕರೆ ಜಾಗದಲ್ಲಿ ಸುಮಾರು 100 ಬೆಡ್ಗಳ ಕಾರ್ಮಿಕ ವಿಮಾ ಆಸ್ಪತ್ರೆ ಮುಂದಿನ ಒಂದೆರಡು ವರ್ಷಗಳಲ್ಲಿ ಆರಂಭವಾಗಲಿದೆ ಎಂದು ಇಎಸ್ಐ ನಿರ್ದೇಶಕರು ಸ್ಪಷ್ಟಪಡಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ಮಾತನಾಡಿ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ವಿಮಾ ಇಲಾಖೆ ರಾಜ್ಯ ಘಟಕದಿಂದ ಒಂದು ವಿಮಾ ಚಿಕಿತ್ಸಾಲಯ ತೆರೆಯಲಾಗುತ್ತಿದೆ. ಇಲ್ಲಿಗೆ ಬರುವ ರೋಗಿಗಳನ್ನು ಪರಿಶೀಲಿಸಿ ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ಕೇಂದ್ರ ಸರಕಾರದಿಂದ 100 ಬೆಡ್ ಆಸ್ಪತ್ರೆ ಸಹ ಮಂಜೂರಾಗಿದ್ದು, ಬಜೆಟ್ನಲ್ಲಿ ಹಣ ಮೀಸಲಿರಿಸಲಾಗಿದೆ. ಕೆಐಎಡಿಬಿ ವತಿಯಿಂದ 5 ಎಕರೆ ಜಾಗ ನೀಡಲಾಗಿದೆ. ಎರಡು ವರ್ಷದಲ್ಲಿ ಆಸ್ಪತ್ರೆ ಆರಂಭವಾಗಲಿದೆ. ಹಾಗಾಗಿ ಕಾರ್ಮಿಕರು ಈ ವಿಮಾ ಚಿಕಿತ್ಸಾಲಯದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ವಸಂತನರಸಾ ಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ, ಕಾರ್ಮಿಕರೇ ಕೈಗಾರಿಕೆಗಳ ಬೆನ್ನೆಲುಬು. ಕೈಗಾರಿಕೆಗಳು, ಕಾರ್ಮಿಕರು ಮತ್ತು ಮಾಲೀಕರು ಈ ಮೂವರು ಒಂದನ್ನು ಬಿಟ್ಟು ಮತ್ತೊಂದನ್ನು ಊಹಿಸಲು ಸಾಧ್ಯವಿಲ್ಲ. ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಈ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತುತ 15 ಸಾವಿರಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇವರಿಗೆ ವೈದ್ಯಕೀಯ ಸೌಲಭ್ಯ ಒದಿಗಿಸುವ ನಿಟ್ಟಿನಲ್ಲಿ ಈ ಹಿಂದೆಯೇ ಮನವಿ ಸಲ್ಲಿಸಲಾಗಿತ್ತು. ಇದರ ಭಾಗವಾಗಿ ಸರಕಾರ ಇಂದು ಇಎಸ್ಐ ಚಿಕಿತ್ಸಾಲಯ ತೆರೆದಿದೆ. ಇದರ ಸದುಪಯೋಗವನ್ನು ಎಲ್ಲಾ ಕಾರ್ಮಿಕರು ಪಡೆದುಕೊಳ್ಳಬೇಕು. ಹಾಗೆಯೇ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಸಕಾಲದಲ್ಲಿ ಅಗತ್ಯ ಇರುವ ಚಿಕಿತ್ಸೆ ನೀಡಿ ಕಾರ್ಮಿಕರಿಗೆ ನೆರವಾಗುವಂತೆ ಮನವಿ ಮಾಡಿದರು.

ವಸಂತನರಸಾಪುರ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಹರೀಶ್ ಮಾತನಾಡಿ, 2011ರಲ್ಲಿ ನಮ್ಮ ಸಂಘ ಸ್ಥಾಪನೆಯಾದ ಸಂದರ್ಭದಲ್ಲಿಯೇ ಇಲ್ಲಿ ಇಎಸ್ಐ ಆಸ್ಪತ್ರೆ ತೆರೆಯಬೇಕೆಂದು ಮನವಿ ಸಲ್ಲಿಸಿದ್ದೇವು. ಇದರ ಭಾಗವಾಗಿಯೇ ಇಂದು ಚಿಕಿತ್ಸಾ ಕೇಂದ್ರ ಆರಂಭಗೊಂಡಿದೆ. ಹಲವಾರು ಸೌಲಭ್ಯ ದೊರೆಯಲಿದೆ. ಕೆಲಸದ ಸಂದರ್ಭದಲ್ಲಿ ಆಗುವ ಸಣ್ಣಪುಟ್ಟ ಅನಾಹುತಗಳಿಗೆ ಚಿಕಿತ್ಸೆ ದೊರೆಯಲಿದೆ. ಕಾರ್ಮಿಕರು ಮತ್ತು ಅವರ ಕುಟುಂಬದವರು ಇದರ ಸೌಲಭ್ಯ ಪಡೆಯಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಕೆಐಎಡಿಬಿ ಎಇಇ ಟಿ.ಎಸ್.ಲಕ್ಷ್ಮೀಶ್, ವಸಂತನರಸಾಪುರ ಕೈಗಾರಿಕಾ ಸಂಘಗಳ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಕಾರ್ಯದರ್ಶಿ ಡಾ.ಸಿ.ವಿ.ಹರೀಶ್, ಜಂಟಿ ಕಾರ್ಯದರ್ಶಿ ಸತ್ಯನಾರಾಯಣ್, ಖಜಾಂಚಿ ಬಾಬುಲಾಲ್ ಜೈನ್, ಮಾನವ ಸಂಪನ್ಮೂಲ ಅಧಿಕಾರಿ ಮಹೇಶ್.ಹೆಚ್, ತುಮಕೂರು ಇಎಸ್ಐ ವೈದ್ಯ ಡಾ.ಆನಂದ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!