ಕುಣಿಗಲ್: ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದ್ದು ಸಮರ್ಪಕವಾಗಿ, ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ತಾಲೂಕು ಕನ್ನಡಸೇನೆ ಅಧ್ಯಕ್ಷ ಶ್ರೀನಿವಾಸ್ ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಹುಚ್ಚಮಾಸ್ತಿಗೌಡ ವೃತ್ತದ ಜಂಕ್ಷನ್ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ರವರ ಕಾಳಜಿಯಿಂದ ಕಾಮಗಾರಿಗೆ ಅನುದಾನ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರು ಕಡೆಯಿಂದ ಹೋಗುವ ಕಲ್ಲುಬಿಲ್ಡಿಂಗ್ ಮುಂಭಾಗದಲ್ಲಿ ಹಾಲಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಅಧಿಕಾರಿಗಳ ಮಾಹಿತಿ ಪ್ರಕಾರ ಚರಂಡಿ ಕಾಮಗಾರಿ ಒಂದು ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ.
ಈ ಚರಂಡಿ ಪಟ್ಟಣದ ವಿವಿಧ ವಾರ್ಡ್ಗಳಿಂದ ಬರುವ ಮಳೆ, ಕೊಳಚೆ ನೀರು ಹರಿಸುವ ಮುಖ್ಯ ಚರಂಡಿಯಾಗಿದೆ. ನಿರ್ಮಾಣ ಹಂತದಲ್ಲಿರುವ ಕಾಮಗಾರಿಯ ಚರಂಡಿ ಒಳ ವಿಸ್ತೀರ್ಣ ನಾಲ್ಕು ಅಡಿ ಅಗಲ ಉದ್ದವಾಗಿದೆ. ಆದರೆ ಸದರಿ ಚರಂಡಿಯು ಮುಂದಕ್ಕೆ ಸಾಗಲು ಇರುವ ಮದ್ದೂರು ರಸ್ತೆಗೆ ಅಡ್ಡಲಾಗಿ ನಿರ್ಮಿಸಿ ಈಗಾಗಲೆ ಕಾಮಗಾರಿ ಪೂರ್ಣಗೊಂಡಿರುವ ಚರಂಡಿ ತುಂಬಾ ಕಿರಿದಾಗಿದೆ. ಅಂದರೆ ಒಂದು ಅಡಿ ಅಗಲ, ಎರಡು ಅಡಿ ಉದ್ದ ಇರುವ ಕಾರಣ ಕೊಟ್ಯಾಂತರ ರೂ. ವೆಚ್ಚ ಮಾಡಿ ಮಾಡುವ ಚರಂಡಿ ಕಾಮಗಾರಿಯಲ್ಲಿ ಹರಿಯುವ ನೀರು ಮುಂದಕ್ಕೆ ಹರಿಯದೆ ರಸ್ತೆ ಮೇಲೆ ಚರಂಡಿ, ಮಳೆ ನೀರು ಹರಿಯುವುದರಿಂದ ಪುರಸಭೆ ಬಸ್ ನಿಲ್ದಾಣದಲ್ಲಿ ಮಳೆನೀರು ನಿಂತು ಇಡೀ ಬಸ್ನಿಲ್ದಾಣ ಕೆರೆಯಂತಾಗಲಿದೆ.
ಅಲ್ಲದೆ ಅಕ್ಕಪಕ್ಕದ ಮಳಿಗೆಗಳಿಗೆ, ಪೆಟ್ರೋಲ್ ಬಂಕ್ಗಳಿಗೆ ನೀರು ನುಗ್ಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲವಾಗಿದ್ದು, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸುವ ಕಾಮಗಾರಿ ಇದ್ದೂ ಇಲ್ಲದಂತಾಗುವ ಕಾರಣ ಕಾಮಗಾರಿ ನಡೆಸುವ ಹಂತದಲ್ಲೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಮಳೆ, ಚರಂಡಿ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.
Comments are closed.