ಕುಣಿಗಲ್: ತಾಲೂಕಿನ ಇತಿಹಾಸ ಪ್ರಸಿದ್ದ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದ ಹುಂಡಿ ಕಳವು ಪ್ರಕರಣ ಮಾಸುವ ಮುನ್ನವೆ ಪಟ್ಟಣದ ಕೋಟೆ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಕೋಟೆ ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಹುಂಡಿ ಕಳವಿಗೆ ವಿಫಲ ಯತ್ನ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬುಧವಾರ ಬೆಳಗ್ಗೆ ನಾಗರಿಕರು ಎಂದಿನಂತೆ ದೇವಾಲಯಕ್ಕೆ ಆಗಮಿಸಿದಾಗ ದೇವಾಲಯದ ಮುಖ್ಯ ದ್ವಾರದ ಬೀಗಗಳನ್ನು ಚೂಪಾದ ಆಯುಧದಿಂದ ಮೀಟಿ ಒಳಹೋಗಲು ಯತ್ನಿಸಿದ್ದು, ಚೂಪಾದ ಆಯುಧ ಹಾಗೂ ಮುರಿದಿರುವ ಬೀಗ, ಎರಡು ಗೋಣಿ ಚೀಲಗಳನ್ನು ಕಳ್ಳರು ಅಲ್ಲಿಯೆ ಬಿಟ್ಟು ಹೋಗಿರುವುದು ಕಂಡು ಬಂದಿದೆ. ಮುಜರಾಯಿ ದೇವಸ್ಥಾನವಾಗಿರುವ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಗ್ರಾಮ ಲೆಕ್ಕಿಗ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ದೇವಾಲಯ ಅರ್ಚಕ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಜನವಸತಿ ಪ್ರದೇಶದ ಮಧ್ಯದಲ್ಲೆ ಇರುವ ದೇವಾಲಯದಲ್ಲಿ ಕಳವಿಗೆ ವಿಫಲ ಯತ್ನ ನಡೆಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
Comments are closed.