ತುಮಕೂರು: ಉತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕೆಂದು ತಿಳಿಸಿದ್ದೇನೆ ಹೊರತು ಕೆ.ಎನ್.ರಾಜಣ್ಣ ಅವರು ಅಥವಾ ಕಾಂಗ್ರೆಸ್ ಗೆ ಮತ ಹಾಕಿ ಎಂದು ನಾನು ಎಲ್ಲೂ ಸಹ ತಿಳಿಸಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರ ಸಂಕಷ್ಟ ಪರಿಹಾರ ಮಾಡುವಂತಹ ಜನಪ್ರತಿನಿಧಿಗಳು ಆಯ್ಕೆಯಾದರೆ ಜನರ ಕಷ್ಟ ಸುಲಭವಾಗಿ ಪರಿಹರಿಸಬಹುದಾಗಿದೆ. ಜನರ ಬಗ್ಗೆ ಕಾಳಜಿ ಇಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ಬೇಡವೆಂದು ಸಾಮಾನ್ಯವಾಗಿ ತಿಳಿಸಿದ್ದೇನೆ.
ಇದಕ್ಕೆ ರಾಜಕೀಯವಾಗಿ ಬೇರೆ ಬೇರೆ ರೀತಿಯಲ್ಲಿ ಬಣ್ಣ ಕೊಡುವುದು ಬೇಡ. ನಾನು ಯಾವಾಗಲೂ ಸಹ ಬಿಜೆಪಿಯ ಸಂಸದ, ಬಿಜೆಪಿಯ ಕಾರ್ಯಕರ್ತ, ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ನನಗೆ ಪಕ್ಷದ ಬಗ್ಗೆ ಅಪಾರ ಗೌರವವಿದೆ. ಹಾಗಾಗಿ ನನ್ನ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಿ, ಅದಕ್ಕೆ ಬಣ್ಣ ಕೊಡುವುದು ಬೇಡ ಎಂದು ಸಂಸದ ಜಿ.ಎಸ್.ಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂದಿಗೂ ನಾನು ನಿಷ್ಠಾವಂತನಾಗಿ ಪಕ್ಷದಲ್ಲಿಯೇ ಪಕ್ಷದ ಪರವಾಗಿ ಇರುತ್ತೇವೆ. ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ನಾವು ಸಹ ಹೆಚ್ಚಿನ ಶ್ರಮ ವಹಿಸುತ್ತೇವೆ ಹಾಗೂ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನೇ ಅಧಿಕಾರಕ್ಕೆ ತರುತ್ತೇವೆ. ನರೇಂದ್ರ ಮೋದಿಯವರು ರಾಷ್ಟ್ರದಲ್ಲೇ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಮುಂದಿನ ತಿಂಗಳು ನಮ್ಮ ಜಿಲ್ಲೆಗೆ ಅವರು ಕೊಟ್ಟಿರುವ ಕೊಡುಗೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ರಾಜ್ಯದಲ್ಲಿಯೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ. ಮತ್ತೊಮ್ಮೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ.
ತುಮಕೂರು ಜಿಲ್ಲೆಯಿಂದ ಬಿಜೆಪಿಯಲ್ಲಿ ಅತಿ ಹೆಚ್ಚು ಶಾಸಕರನ್ನ ಕಳುಹಿಸಿಕೊಡುವುದು ನನ್ನ ಆದ್ಯ ಕರ್ತವ್ಯ. ನನ್ನ ಈ ಒಂದು ಹೇಳಿಕೆಯನ್ನು ಸಾಮಾನ್ಯವಾಗಿ ಹೇಳಿದ್ದೇನೆ. ಅದನ್ನ ತಿರುಚಿ ರಾಜಕೀಯ ಗೊಳಿಸುವುದು ಬೇಡ ಎಂದು ಸಂಸದರು ತಿಳಿಸಿದ್ದಾರೆ.
Comments are closed.