ಗುರಿ ಇಲ್ಲದ ಮನುಷ್ಯನ ಜೀವನ ವ್ಯರ್ಥ

ಯುವ ಜನಾಂಗಕ್ಕೆ ಗುರಿ, ಆತ್ಮ ವಿಶ್ವಾಸ ಅತ್ಯಗತ್ಯ: ವೈ.ಎಸ್.ಪಾಟೀಲ್

65

Get real time updates directly on you device, subscribe now.


ತುಮಕೂರು: ಗುರಿ ಇಲ್ಲದ ಮನುಷ್ಯನ ಜೀವನ ಸಾರ್ಥಕತೆ ಪಡೆಯುವುದಿಲ್ಲ. ಯುವ ಜನಾಂಗಕ್ಕೆ ಗುರಿ ಮತ್ತು ಆತ್ಮವಿಶ್ವಾಸ ಬಹಳ ಮುಖ್ಯವಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಳ್ಳಬೇಕು ಮತ್ತು ಗುರಿ ತಲುಪುವ ತನಕ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕರೆ ನೀಡಿದರು.

ಸ್ವಾಮಿ ವಿವೇಕಾನಂದರ 160ನೇ ಜನ್ಮದಿನೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂದೆ- ತಾಯಿ ಅಥವಾ ದೇಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಥವಾ ನಮ್ಮ ದೇಹದ ಶಕ್ತಿ ಕುಂದಿಸುವ ವಿಷಯ ಹಾಗೂ ಚಟಗಳಿಂದ ಯುವಜನತೆ ದೂರವಿರಬೇಕು ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದರಷ್ಟು ಜ್ಞಾನಿಗಳು ನಾವಲ್ಲ. ಆದರೆ ಅವರಂತೆ ಸಾಧನೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು. ಇದಕ್ಕಾಗಿ ನಿರಂತರತೆ ಅತಿ ಮುಖ್ಯವಾಗುತ್ತದೆ. ಸ್ವಾಮಿ ವಿವೇಕಾನಂದರ ಮಾತು ಬರೀ ಮಾತಲ್ಲ. ಅದು ಮಂತ್ರದ ಮಾತುಗಳಾಗಿರುತ್ತಿತ್ತು. ಅವರ ಸಾಧನೆ, ಅಧ್ಯಯನ ಮಾತಿನ ರೂಪದಲ್ಲಿ ಸಾಕಾರಗೊಳ್ಳುತ್ತಿತ್ತು ಎಂದರು.

ಬೆಂಗಳೂರಿನ ಟಾಟಾ ಸಂಶೋಧನಾ ಕೇಂದ್ರ, ಪ್ರತಿಷ್ಟಿತ ರಾಕ್ ಪಿಲ್ಲರ್ ಸಂಸ್ಥೆಗಳ ಸ್ಥಾಪನೆಗೆ ವಿವೇಕಾನಂದರೇ ಪ್ರೇರಣೆ, ಅಂತಹ ಮಹಾನ್ ವ್ಯಕ್ತಿಯನ್ನು ನಾವಿಂದು ನೆನೆದು ಅವರ ಹಾದಿಯಲ್ಲಿ ಸಾಗಬೇಕಿದೆ ಎಂದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ದೇಶದ ಬಗ್ಗೆ ಅಭಿಮಾನವನ್ನು ಮೊದಲ ಆದ್ಯತೆಯನ್ನಾಗಿ ನಾವುಗಳು ಇಟ್ಟುಕೊಳ್ಳಬೇಕು. ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವವರನ್ನು ನಾವು ಆದರ್ಶವಾಗಿಟ್ಟುಕೊಂಡು ಯುವ ಜನತೆ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಇಡೀ ವಿಶ್ವದಲ್ಲೇ ಅತೀ ಹೆಚ್ಚು ಯುವ ಜನಾಂಗವಿರುವ ದೇಶ ನಮ್ಮದಾಗಿದೆ. ಇಷ್ಟು ದೊಡ್ಡ ಪ್ರಮಾಣದ ಯುವ ಜನಾಂಗ- ಮಾನವ ಸಂಪನ್ಮೂಲ ದೇಶದ ಆಸ್ತಿಯಾದಾಗ ಮಾತ್ರ ನಮ್ಮ ದೇಶ ವಿಶ್ವ ಗುರು ಎಂದು ಕರೆಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದು ಶಾಸಕರು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಹಾಗೂ ಕಾರ್ಯದರ್ಶಿ ಸ್ವಾಮಿ ಪರಮಾನಂದಜಿ ಮಹಾರಾಜ್ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ನಾಗರಾಜ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!