ತುಮಕೂರು: ಬಲಿಷ್ಠ ರಾಷ್ಟ್ರಕಟ್ಟಲು ವಿವೇಕಾನಂದರ ಆದರ್ಶ ತತ್ವ ಆತ್ಮ ವಿಶ್ವಾಸ ಆಗತ್ಯ. ಪ್ರತಿಯೊಬ್ಬರೂ ಸನ್ಮಾರ್ಗದ ಹಾದಿಯಲ್ಲಿ ದುಡಿಯಬೇಕು. ಇದರಿಂದ ವಿವೇಕರ ಯಶಸ್ಸಿನ ಪಾಠಗಳಲ್ಲಿ ಬೆಳಕು ಕಾಣುವುದು ಖಂಡಿತ. ಸಂತೃಪ್ತ ಬದುಕಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಯಾಶೀಲತೆಗೆ ಒತ್ತು ಕೊಟ್ಟಾಗ ಪ್ರತಿ ಸಂಸ್ಥೆಯು ಉನ್ನತ ಮಟ್ಟಕ್ಕೆ ಏರಲಿವೆ. ವಿವೇಕರಂಥ ಮಹನೀಯರ ಬದುಕು ಎಲ್ಲರಿಗೂ ಪ್ರೇರಣೆ, ಜ್ಞಾನಾರ್ಜನೆ ಆಗಬೇಕಾದರೆ ದೇಶ ಸುತ್ತಿ ಕೋಶ ಓದಬೇಕು. ವಿವೇಕರ ಸಂದೇಶವನ್ನು ನಾವೆಲ್ಲರೂ ಪಾಲಿಸಿದಾಗ ಮಾತ್ರವೇ ಎಲ್ಲಾ ವಯೋಮಾನದವರು ಬದಲಾವಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪ್ರಾಕ್ತನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಕೊಟ್ರೇಶ್ ಮಾತನಾಡಿ, ವಿವೇಕಾನಂದರ ಹೆಸರಿನಲ್ಲಿಯೇ ಪ್ರಜ್ವಲ ಬೆಳಕಿದೆ. ಅವರ ವಿಚಾರಗಳು ಸದಾ ಕಾಲ ಜೀವಂತ ಹಾಗೂ ಪ್ರಸ್ತುತ. ಆಧ್ಯಾತ್ಮ ಮತ್ತು ಬೌದ್ಧಿಕ ಜಗತ್ತಿನ ವಿಸ್ತಾರವನ್ನು ದಾರ್ಶನಿಕನಾಗಿ ಸ್ವಾಮಿ ವಿವೇಕರು ತಿಳಿಸಿದ್ದಾರೆ. ಜೀವ ಯಾವತ್ತಾದರೂ ಹೋಗುವುದೆ, ಆದರೆ ಜೀವನ ನಮ್ಮದು, ಅದನ್ನು ನಾವೇ ರೂಪಿಸಿಕೊಳ್ಳಬೇಕು ಎಂಬ ಸ್ವಾಮಿ ವಿವೇಕಾನಂದರ ವಾಣಿ ನೆನೆದು ವಿಶೇಷ ಉಪನ್ಯಾಸ ನೀಡಿದರು.
ಸಾಧನೆ ಇಲ್ಲದ ಸಾವು ಸಾವಿಗೆ ಅವಮಾನವಿದ್ದಂತೆ, ಆದರ್ಶವಿಲ್ಲದ ಬದುಕು ಕಪಟ ಸನ್ಯಾಸಿಯಂತೆ ಚಂಚಲ. ಯುವಕರೇ ಭಾರತದ ಐಕಾನ್ಗಳು ಎಂದು ವಿವೇಕಾನಂದರು ನಂಬಿದ್ದರು. ದೇಶಕ್ಕೆ ಲಾಭ ಯುವಕರಿಂದ, ಸಮಾಜದ ಸ್ವರೂಪವನ್ನು ಅರ್ಥ ಮಾಡಿಕೊಂಡರೆ ನಾನು ಸಮಾಜಕ್ಕೆ ಏನು ಮಾಡಬಹುದು ಅಂಥ ತಿಳಿದುಕೊಳ್ಳಬಹುದು. ಗುರು ಎಂದರೆ ವ್ಯಕ್ತಿ ಅಲ್ಲ. ಬದಲಿಗೆ ಶಕ್ತಿ ಎಂದು ವಿವೇಕರು ನಂಬಿದ್ದ ಭರವಸೆಗಳನ್ನು ತಿಳಿಸಿದರು.
ತುಮಕೂರು ವಿವಿಯ ಕುಲಸಚಿವ ಡಾ.ಪ್ರಸನ್ನಕುಮಾರ್ ಕೆ.ಮಾತನಾಡಿ, ವಿವೇಕಾನಂದರ ಜೀವನ ಪ್ರತಿಯೊಬ್ಬರ ಬದುಕನ್ನು ಬೆಳಗಿಸುವ ಕಿರಣ, ಯುವ ಮನಸುಗಳು ಭಾರತಕ್ಕೆ ಬೇಕು. ಈ ನಮ್ಮ ವಿಶ್ವವಿದ್ಯಾಲಯ ವಿವೇಕರ ಕನಸಿನ ಯುವ ಶಕ್ತಿ ಹೊರತರುವ ಸಂಸ್ಥೆಯಾಗಲಿ. ವಿದ್ಯಾರ್ಥಿಗಳ ಸಾಧನೆ ವಿಶ್ವ ವಿದ್ಯಾಲಯದ ಕನ್ನಡಿಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ.ಚೇತನ್ ಪ್ರತಾಪ್.ಕೆ.ಎನ್. ಭಾಗವಹಿಸಿದ್ದರು.
Comments are closed.