ರೈಲ್ವೆ ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳ ಪರಿಶೀಲನೆ

155

Get real time updates directly on you device, subscribe now.


ತುಮಕೂರು: ತುಮಕೂರು ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯಿಂದ ಜನರಿಗೆ ಅನುಕೂಲಕ್ಕಾಗಿ ಹಲವಾರು ಕಾಮಗಾರಿ ಕೈಗೊಳ್ಳುವಂತೆ ಸಂಸದ ಜಿ.ಎಸ್.ಬಸವರಾಜು ಪತ್ರ ಬರೆದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಗರದ ಪ್ರವಾಸಿ ಮಂದಿರದಲ್ಲಿ ಸಂಸದರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಸಂಸದ ಜಿ.ಎಸ್.ಬಸವರಾಜು ಅವರು ನಗರದ ಮೂಲಕ ಹಾದು ಹೋಗುವ ರೈಲ್ವೆ ಹಳಿಗೆ ಗೋಕುಲ ಬಡಾವಣೆ, ಮಹಾಲಕ್ಷ್ಮಿ ಬಡಾವಣೆಯ 80 ಅಡಿ ರಸ್ತೆ, ಭೀಮಸಂದ್ರ ಬಳಿ ಪೆಡಸ್ಟೀಯಲ್ ಅಂಡರ್ ಪಾಸ್, ಗುಬ್ಬಿ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ನಿಟ್ಟೂರು ಬಳಿ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಕುರಿತಂತೆ ರೈಲ್ವೆ ಇಲಾಖೆಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಸಂಸದ ಪತ್ರದ ಹಿನ್ನೆಲೆಯಲ್ಲಿ ಗುರುವಾರ ದಕ್ಷಿಣ ರೈಲ್ವೆ ಬೆಂಗಳೂರು ವಿಭಾದ ಎಡಿಆರ್ಎಂ ಲಕ್ಷ್ಮಣ್ಸಿಂಗ್, ವಿಭಾಗೀಯ ಮಾರುಕಟ್ಟೆ ವ್ಯವಸ್ಥಾಪಕ ಎ.ಎನ್.ಕೃಷ್ಣಾರೆಡ್ಡಿ, ಮಖ್ಯ ಇಂಜಿನಿಯರ್ ಪಿ.ಆರ್.ಎಸ್.ರಾಮನ್, ಡಿಇಎನ್ ಪುಷ್ಪೇಂದ್ರಕುಮಾರ್, ಎಡಿಇಎನ್ ರಜತ್ ಹಾಗೂ ಸ್ಥಳೀಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಗೋಕುಲ ಬಡಾವಣೆ, ಬಟವಾಡಿ 80 ಅಡಿ ರಸ್ತೆ, ಭೀಮಸಂದ್ರ, ಗುಬ್ಬಿ ಪಟ್ಟಣ ಹಾಗೂ ನಿಟ್ಟೂರಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರಲ್ಲದೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ದಿನದಿಂದ ದಿನಕ್ಕೆ ತುಮಕೂರು ಮೂಲಕ ಓಡಾಡುವ ರೈಲುಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಗೋಕಲು ಬಡಾವಣೆ ಮತ್ತು ಬಟವಾಡಿಯ ಮಹಾಲಕ್ಷ್ಮಿ ನಗರದ ರೈಲ್ವೆ ಗೇಟ್ಗಳ ಬಳಿ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂಬುದು ನಮ್ಮ ಒತ್ತಾಯವಾಗಿತ್ತು. ನಗರದ ಶೇ.30 ಭಾಗದ ಜನರು ರೈಲ್ವೆ ಹಳಿಯಿಂದ ಆಚೆಗೆ ವಾಸ ಮಾಡುತ್ತಿದ್ದಾರೆ. ಅವರು ಪ್ರತಿ ಬಾರಿ ರೈಲ್ವೆ ಗೇಟ್ ಹಾಕಿದಾಗಲು ಹತ್ತಾರು ನಿಮಿಷ ಕಾಯ ಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿ ಅಂಡರ್ ಅಥವಾ ಓವರ್ ಬ್ರಿಡ್ಜ್ ನಿರ್ಮಾಣಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ತುಮಕೂರು ನಗರದ ಹೊರತಾಗಿ ಈಗಾಗಲೇ ಭೀಮಸಂದ್ರ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣದಿಂದ ಮಳೆಗಾಲದಲ್ಲಿ ಜನರು ಓಡಾಡಲು ಪರದಾಡುವಂತಹ ಸ್ಥಿತಿ ಇದೆ. ಹಾಗಾಗಿ ಆ ಭಾಗದಲ್ಲಿ ಒಂದು ಪೆಡಸ್ಟಿಯಲ್ ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂಬುದು ನಮ್ಮ ಕೋರಿಕೆಯಾಗಿದೆ. ಇದರ ಜೊತೆಗೆ ಗುಬ್ಬಿ ರೈಲ್ವೆ ನಿಲ್ದಾಣದ ಸಮೀಪ ಮೇಲ್ಸೇತುವೆ ನಿರ್ಮಾಣದಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.

ಅಲ್ಲದೆ ನಿಟ್ಟೂರು ಗ್ರಾಮದ ಬಳಿ ಅಂದರೆ ನಿಟ್ಟೂರು ಕಲ್ಲೂರು ನಡುವೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಪತ್ರ ಬರೆದಿದ್ದೆ. ಅಧಿಕಾರಿಗಳು ಬಂದು ಜಾಗದ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಡಿಪಿಆರ್ ತಯಾರಿಸಿ ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ಬೆಂಗಳೂರು ಮತ್ತು ತುಮಕೂರು ನಡುವೆ ಹೆಚ್ಚಿನ ಡೆಮೋ ರೈಲು ಓಡಿಸಲು ಸಹ ಅಧಿಕಾರಿಗಳು ಮತ್ತು ರೈಲ್ವೆ ಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!