ತುರುವೇಕೆರೆ: ಪಟ್ಟಣದ ಮುತ್ತುರಾಯ ನಗರದ ಮನೆಯೊಂದರ ಬೀಗ ಮುರಿದು ಹಾಡ ಹಗಲಲ್ಲೇ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ, ಬೆಳ್ಳಿ ಸಾಮಾನು ಸಹಿತ ಪರಾರಿಯಾಗಿದ್ದಾರೆ.
ಪಟ್ಟಣದ ಮುತ್ತುರಾಯ ನಗರದ ವಾಸಿ, ಬೆಸ್ಕಾಂ ನೌಕರ ಆನಂದಕುಮಾರ್ ಕಾರ್ಯ ನಿಮಿತ್ತ ತಮ್ಮ ಕುಟುಂಬದೊಂದಿಗೆ ಬೇರೆ ಊರಿಗೆ ತೆರಳಿದ್ದರು. ಇದನ್ನರಿತ ಕಳ್ಳರು ಹಾಡ ಹಗಲಲ್ಲೇ ಮನೆಯ ಮುಂಬಾಗಿಲಿನಿಂದ ಮನೆ ಪ್ರವೇಶಿಸಿದ್ದಾರೆ. ಮನೆಯ ಒಳಗಿದ್ದ ಬೀರುವಿನ ಬೀಗ ಮುರಿದು 80 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ, ಸುಮಾರು 2.5 ಲಕ್ಷಕ್ಕೂ ಹೆಚ್ಚು ನಗದು ಹೊತ್ತೊಯ್ದಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕೊಬ್ಬರಿ ಹಾಗೂ ದೇಗುಲ ಕಳ್ಳತನಗಳು ಜನಮಾನಸದಿಂದ ಮಾಸುವ ಮುನ್ನವೇ ಪಟ್ಟಣದಲ್ಲಿ ಹಾಡಹಗಲಲ್ಲೇ ನಡೆದಿರುವ ಕಳ್ಳತನದಿಂದ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮೀಕಾಂತ, ಪಿಎಸ್ಐ ಹೊನ್ನೇಗೌಡ ಹಾಗೂ ಶ್ವಾನದಳ ಹಾಗೂ ಬೆರಳಚ್ಚು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮಾಲೀಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ತುರುವೇಕೆರೆ ಪೊಲೀಸರು ಕಳ್ಳರ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.
Comments are closed.