ತಿಪಟೂರು: ನನ್ನ ಅಧಿಕಾರ ಅವಧಿಯಲ್ಲಿ ಮಠ ಮಾನ್ಯಗಳಿಗೆ ಅನುದಾನ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಜನ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿದ್ದರೆ ಅದು ಶ್ರೀಗುರು ಸಿದ್ದರಾಮೇಶ್ವರರು ಸಂಚರಿಸಿ ಅನುಸರಿಸಿ ಬೋಧಿಸಿದ ತತ್ವ ಸಿದ್ಧಾಂತಗಳೇ ನನಗೆ ಮಾರ್ಗ ದರ್ಶನವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಿಪಟೂರಿನಲ್ಲಿ ನಡೆದ 850ನೇ ಸಿದ್ದರಾಮೇಶ್ವರ ಜಯಂತಿಯಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಹಾಗೂ ಹೊರ ರಾಜ್ಯದಲ್ಲಿ ಎಲ್ಲಿ ನಡೆದರು ಸಿದ್ದರಾಮೇಶ್ವರ ಜಯಂತಿಗೆ ಹಾಜರಾಗುತ್ತೇನೆ. ಚಾಲುಕ್ಯ ಸಾಮ್ರಾಜ್ಯದಲ್ಲಿ ನಡೆದ ವಚನ ಕ್ರಾಂತಿ ಸಾಮಾಜಿಕ ಕ್ರಾಂತಿ ಯಲ್ಲಿ ಅಲ್ಲಮಪ್ರಭು ಅಕ್ಕಮಹಾದೇವಿ ಬಸವಣ್ಣ ಗುರು ಸಿದ್ದರಾಮೇಶ್ವರರು ಶಿವ ಶರಣರು ಮತ್ತು ಜನಸಾಮಾನ್ಯರ ಒಳಿತಿಗಾಗಿ ಸಾಮಾಜಿಕ ಕ್ರಾಂತಿ ಮಾಡಿ ತೋರಿಸಿದರು ಸೊಲ್ಲಾಪುರದಲ್ಲಿ 4ಸಾವಿರ ಶರಣರೊಂದಿಗೆ ನಿರ್ಮಿಸಿದ ಕೆರೆ ಎಂದಿಗೂ ಬತ್ತಿದ ನಿದರ್ಶನವಿಲ್ಲ. ಸಿದ್ದರಾಮೇಶ್ವರ ಮಾರ್ಗದರ್ಶನದಂತೆ ಸುಕ್ಷೇತ್ರ ಕೆರಗೋಡಿ ರಂಗಾಪುರ ಮಠವು ಸಹ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕಲ್ಪತರು ಜಿಲ್ಲೆಗೆ ಹೆಮ್ಮೆಯ ವಿಚಾರ ನನ್ನ ಅವಧಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 25 ಲಕ್ಷ ಫಲಾನುಭವಿಗಳಿಗೆ 1.20 ಹೆಣ್ಣು ಮಕ್ಕಳಿಗೆ ಹಣ ಸಿಕ್ಕಿದೆ. ಹಾಲು ಉತ್ಪಾದನೆಗೆ ಪ್ರೋತ್ಸಾಹ ಧನ ನೀಡಿದ್ದೇನೆ ಎಂದರು.
ಗುರು ಪರದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಮೂರು ಬಾರಿ ಸಿದ್ದರಾಮೇಶ್ವರ ಜಯಂತಿ ನಡೆದಿರುವುದು ಕಲ್ಪತರು ನಾಡಿಗೆ ಹೆಮ್ಮೆಯ ಗರಿ ಎಂದು ಬಿಎಸ್ವೈ ತಿಳಿಸಿದರು.
ಸಾನಿಧ್ಯ ವಹಿಸಿದ್ದ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಧಾರ್ಮಿಕ ಸಮಾರಂಭದಲ್ಲಿ ಸೇರಿರುವ ಜನಸ್ತೋಮ ಭಕ್ತರ ಭಕ್ತಿಯ ಸಂಕೇತವಾಗಿದೆ. 68 ಸಾವಿರ ವಚನ ರಚಿಸಿದ್ದ ತರಳಬಾಳು ಮಠದ ಮರಳು ಸಿದ್ಧರಿಗೂ ಹಾಗೂ ಸಿದ್ಧರಾಮೇಶ್ವರರಿಗೂ ಅವಿನಾಭಾವ ಸಂಬಂಧವಿದ್ದು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಸ್ತುತ ರಾಜಕೀಯ ನಾಯಕರಿಗೆ ಗುರು ಸಿದ್ದರಾಮೇಶ್ವರರ ಮಾರ್ಗದರ್ಶನದ ಅವಶ್ಯಕತೆಯಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀಗಳ ತತ್ವ ಪಾಲನೆ ಪಾಲಿಸಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಯಡಿಯೂರಪ್ಪನವರು ಆದೇಶಿಸುವ ಉದ್ಭವ ಮೂರ್ತಿಯಾದರೆ ಬೊಮ್ಮಾಯಿಯವರು ಪರಿಪಾಲಿಸುವ ಉತ್ಸವ ಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕಾರಣಿಗಳಿಗೆ ನೈತಿಕತೆಯ ನೀತಿ ಪಾಠ ಅವಶ್ಯಕತೆಯಿದೆ. ಧಾರ್ಮಿಕ ಸಭೆಗಳಲ್ಲಿ ರಾಜಕೀಯ ವೇದಿಕೆಗಳಲ್ಲಿ ಪರಸ್ಪರ ಅವಹೇಳನಕಾರಿ, ಅಶ್ಲೀಲ ಪದ ಬಳಕೆ ಬೇಸರದ ವಿಚಾರವಾಗಿದೆ. ಇದರಿಂದ ನಾಡಿನ ಜನರು ಸತ್ಪ್ರಜೆಗಳಾಗುವುದಿಲ್ಲ ಎಂದರು.
ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದರಾಮೇಶ್ವರ ಮಾರ್ಗದರ್ಶನದಂತೆ ಎಲ್ಲಾ ಭಾಗದಲ್ಲಿಯೂ ಕೆರೆ ಕಟ್ಟೆ ನಿರ್ಮಾಣ ಮಾಡಿ ಪ್ರತಿ ಗ್ರಾಮದಲ್ಲಿಯೂ ಶಿಕ್ಷಣ ಬೆಳಕು ನೀಡುತ್ತಿರುವುದು ಶರಣ ಸಂಸ್ಕೃತಿಯ ಪ್ರತೀಕವಾಗಿದೆ. ನಾಡಿನ ಜನರು ಹೆಚ್ಚಿನ ಕೃಷಿಗೆ ಸಿದ್ದರಾಮೇಶ್ವರ ಮಾರ್ಗದರ್ಶನದಂತೆ ನಾಡಿನ ಜನರು ನಡೆಯಬೇಕು ಎಂದು ಆಶಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಯಡಿಯೂರಪ್ಪನವರ ಅಧಿಕಾರ ಅವಧಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ನೀರಾವರಿ ಯೋಜನೆಗೆ ಖರ್ಚು ಮಾಡಿದ್ದರು, ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಜಿಲ್ಲೆಗೂ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದೇ ರೀತಿ ಭದ್ರಾ ಮೇಲ್ದಂಡೆ ಯೋಜನೆಯಿಂದ ನಮ್ಮ ಜಿಲ್ಲೆಗೆ ನೀರು ಹರಿಸುವ ಪ್ರಯತ್ನ ಮಾಡಬೇಕೆಂದು ಮನವಿ ಸಲ್ಲಿಸಿದರು.
ಸಚಿವ ಕಾರಜೋಳ ಮಾತನಾಡಿ, ನಾಡಿನ 771 ಗಣಂಗಳು ಅನುಭವ ಮಂಟಪ ಸ್ಥಾಪಿಸಿ ಧರ್ಮ ಸಾಮಾಜಿಕ ಕಳಕಳಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅಂದಿನ ಮಾರ್ಗದರ್ಶನವೇ ಇಂದಿನ ಸರ್ಕಾರಕ್ಕೆ ದಾರಿಯಾಗಿದೆ ಎಂದರು.
ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಮಾತನಾಡಿ, 12ನೇ ಶತಮಾನದಲ್ಲಿ ಮೇಲು ಕೀಳು ಮೇಲ್ಜಾತಿ ಕೆಳಜಾತಿ ನಿರ್ಮೂಲನೆ ಮಾಡಲು ಬಸವಾದಿ ಶರಣರು ಗುರು ಸಿದ್ದರಾಮೇಶ್ವರರು ವೈದ್ಯರ ರೂಪದಲ್ಲಿ ಚಿಕಿತ್ಸೆ ನೀಡಿ ಅಸ್ಪೃಶ್ಯತೆ ನಿರ್ಮೂಲನೆ ಮಾಡಿದರು. ನಂತರ ಶಿಕ್ಷಣ ನೀಡಿ ಕೀಳರಿಮೆ ಹೋಗಲಾಡಿಸಲು ಪ್ರಯತ್ನಿಸಿದರು. ಆದರೆ ವಿದ್ಯಾವಂತರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಪಾಲಿಸುತ್ತಿರುವುದು ದುರಾದೃಷ್ಟಕರ, ಮತ್ತೆ ವಚನ ಕ್ರಾಂತಿ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮಕ್ಕೆ ಮೊದಲು ಕಲ್ಲೇಶ್ವರ ಸ್ವಾಮಿ ದೇವಸ್ಥಾನದಿಂದ 850 ಪೂರ್ಣ ಕುಂಭದೊಂದಿಗೆ ಗುರು ಸಿದ್ದರಾಮೇಶ್ವರ ಸ್ವಾಮಿ ಮೆರವಣಿಗೆ ವೇದಿಕೆಯತ್ತ ಬರ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್. ಮಾಜಿ ಶಾಸಕ ಕೆ.ಷಡಕ್ಷರಿ, ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್, ಸ್ವಾಗತ ಸಮಿತಿಯ ಅಧ್ಯಕ್ಷ ಮಧುಸೂದನ್, ನಗರಸಭೆ ಅಧ್ಯಕ್ಷ ರಾಮ್ ಮೋಹನ್, ಶಶಿಕಿರಣ್, ಸೊಪ್ಪು ಗಣೇಶ್, ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಮಾಜಿ ಟೂಡ ಅಧ್ಯಕ್ಷ ಸಿ.ಬಿ.ಶಶಿಧರ್, ಕೆಪಿಸಿಸಿ ಸದಸ್ಯ ಯೋಗೇಶ್, ನ್ಯಾಕೇನಹಳ್ಳಿ ಸುರೇಶ್ ಹಾಗೂ ಸ್ವಾಗತ ಸಮಿತಿ ಸದಸ್ಯರು ಭಾಗವಹಿಸಿದ್ದರು.
Comments are closed.