ಕುಣಿಗಲ್: ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಅಬ್ಬರದ ಜೊತೆ ರಾಸು ಮಾಲೀಕರಿಗೆ ತಮ್ಮ ಜೊತೆಯಿದ್ದ ರಾಸುಗಳು ಗಂಟು ರೋಗದಿಂದ ಮೃತಪಟ್ಟ ಕರಾಳ ನೆನಪಿನ ಜೊತೆ 2023ರ ಸಂಕ್ರಾಂತಿಯನ್ನು ತಾಲೂಕಿನ ರೈತರು ಆಚರಿಸುವಂತಾಗಿದೆ.
2023ರ ಸಂಕ್ರಾಂತಿ ರೈತರಿಗೆ ಒಂದು ರೀತಿ ಕರಾಳ ನೆನಪು ಸೃಷ್ಟಿಸುವ ಹಬ್ಬವಾದರೆ, ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ವರ್ಷಪೂರ್ತಿ ಬೆಳೆದ ಬೆಳೆ ಕಣದಲ್ಲಿ ರಾಶಿ ಹಾಕಿ ಪೂಜೆ ಸಲ್ಲಿಸಿ ಮನೆಗೆ ಕೊಂಡೊಯ್ಯಬೇಕಿದ್ದು, ಅಕಾಲಿಕ ಮಳೆಯ ಕಾರಣ ಕೈಗೆ ಬಂದ ತುತ್ತು ಅರ್ಧಕ್ಕೆ ಅರ್ಧ ಬಾಯಿಗೆ ಬರದಂತಾಗಿ, ಬಂದ ಅರೆ ಬರೆ ಬೆಳೆ ಪೂಜಿಸುವ ಅನಿವಾರ್ಯತೆ ಆಗಿದೆ. ತಮ್ಮ ದುಡಿಮೆಗೆ ಸಾಥ್ ನೀಡಿದ ರಾಸುಗಳನ್ನು ಸಿಂಗರಿಸಿ ಅವುಗಳನ್ನು ಪೂಜಿಸಿ ಸಂಭ್ರಮಿಸುವ ಹಬ್ಬ ಸಂಕ್ರಾಂತಿಯಾಗಿದೆ. ಆದರೆ ಕಳೆದ ಸಾಲಿನಲ್ಲಿ ಗಂಟು ರೋಗಕ್ಕೆ ಸಾಕಷ್ಟು ಜಾನುವಾರು ಮೃತಪಟ್ಟಿದ್ದು 2022ರ ಸಂಕ್ರಾಂತಿಗೆ ಇದ್ದ ಜೊತೆಗಾರ ರಾಸುಗಳು 2023ರ ಸಂಕ್ರಾಂತಿಗೆ ಇಲ್ಲವಾಗಿರುವ ಕರಾಳ ನೆನಪು ಅನ್ನದಾತನ ಕಾಡುತ್ತಿದೆ.
ತಾಲೂಕಿನಲ್ಲಿ ಒಟ್ಟಾರೆ 69 ಸಾವಿರ ಎತ್ತು, ಎಮ್ಮೆ, ಹಸುಗಳಿದ್ದು ಪಶುಸಂಗೋಪನೆ ಇಲಾಖೆ ಪ್ರಕಾರ ನಾಟಿ ಹಸು ಸೇರಿದಂತೆ ಕೆಲ ಜಾತಿ ರಾಸುಗಳು ಸುಮಾರು ಇನ್ನೂರಕ್ಕೂ ಹೆಚ್ಚು ಮೃತಪಟ್ಟಿವೆ ಎನ್ನಲಾಗಿದೆ. ಈ ಬಾರಿ ಸಂಕ್ರಾಂತಿ ನಮಗೆ ಕಳೆದ ಬಾರಿ ಸಂಕ್ರಾಂತಿಯಲ್ಲಿ ಜೊತೆಯಲ್ಲಿದ್ದ ಜೊತೆಗಾರ ಹಸುಗಳ ಅಕಾಲಿಕ ಮರಣದ ನೆನಪಿನ ಜೊತೆ ಹಬ್ಬ ಆಚರಣೆ ಕಾಡುತ್ತಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
2023ರ ಸಂಕ್ರಾಂತಿ ಅನ್ನದಾತನಿಗೆ ಅತಿವೃಷ್ಟಿಯ ಹಾನಿ ಜೊತೆ ಗಂಟುರೋಗದಿಂದ ಜಾನುವಾರು ಮೃತಪಟ್ಟ ಕರಾಳ ನೆನಪು ಕಾಡಿದರೆ, ಹಬ್ಬಾಚರಣೆಗೆ ಸಿದ್ಧತೆ ನಡೆಸಿರುವ ಗೃಹಿಣಿಯರು, ನಾಗರಿಕರಿಗೆ ಬೆಲೆ ಏರಿಕೆ ಶಾಕ್ ನೀಡುತ್ತಿದೆ. ಕೆಜಿ ಅವರೆಕಾಯಿ 100, ಸೇರಿನ ಲೆಕ್ಕದ ಕಡಲೆಕಾಯಿ ಮಾಯವಾಗಿ ಕೆಜಿ ಲೆಕ್ಕಕ್ಕೆ ಬಂದಿದ್ದು ಕೆಜಿಯೊಂದಕ್ಕೆ 100 ರೂ, ಕಬ್ಬಿನ ಜಲ್ಲೆ ಒಂದಕ್ಕೆ 50 ರೂ, ಸಿಹಿ ಗೆಣಸು ಕೆಜಿಗೆ 50 ರೂ. ಆಗಿದೆ ಇನ್ನು ಎಳ್ಳು ಮಾಡುವ ಪರಿಪಾಠ ಬಹುತೇಕ ಮಾಯವಾಗಿ ರೆಡಿಮೇಡ್ ಎಳ್ಳಿನ ಭರಾಟೆ ಜೋರಿದೆ. ರೆಡಿಮೆಡ್ ಎಳ್ಳು ಕೆಜಿಗೆ 350 ರೂ. ಹೂವು, ಹಣ್ಣು, ತರಕಾರಿ ದರದಲ್ಲು ಏರಿಕೆ ಕಂಡಿದೆ. ಹೂವಿನ ದರ ಗಗನ ಮುಖಿಯಾಗಿದ್ದು ಮಾರು ಹೂ ಕೊಳ್ಳುವ ಮಹಿಳೆಯರು ಮೊಳಕೊಂಡು ತೃಪ್ತಿ ಪಡುವಂತಾಗಿದೆ.
Comments are closed.