ಆಡಳಿತ ಸೇವೆಗೆ ಕನ್ನಡಿಗರ ಪಾಲು ಹೆಚ್ಚಬೇಕು: ನರಹಳ್ಳಿ ಬಾಲಸುಬ್ರಮಣ್ಯ

83

Get real time updates directly on you device, subscribe now.


ತುಮಕೂರು: ಕನ್ನಡ ಸೇವೆ ಎಂದರೆ ಕೇವಲ ಕವಿತೆ, ಕವನ, ಕಾದಂಬರಿ ರಚಿಸುವುದಷ್ಟೇ ಅಲ್ಲ. ಸಮಾಜಮುಖಿ ಕೆಲಸಗಳಾಗಬೇಕಾದರೆ ಅಧಿಕಾರ ಮುಖ್ಯ. ಕನ್ನಡಿಗರು ಹೆಚ್ಚಾಗಿ ಆಡಳಿತ ಸೇವೆಗೆ ಬರಬೇಕು. ಅನುಕೂಲ, ಅಧಿಕಾರ ಹಾಗೂ ಸೇವೆಯದೃಷ್ಟಿಯಿಂದ ಯುಪಿಎಸ್ಸಿ ಅವಶ್ಯಕ. ಇಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಪರಿಶ್ರಮ ಮುಖ್ಯಎಂದು ಕನ್ನಡ ಸಾಹಿತ್ಯ ವಿಮರ್ಶಕ ಮತ್ತು ಸಂಸ್ಕೃತಿ ಚಿಂತಕ ಪ್ರೊ. ನರಹಳ್ಳಿ ಬಾಲಸುಬ್ರಮಣ್ಯ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಬದುಕು ಕಟ್ಟುವದಾರಿ-ಯುಪಿಎಸ್ಸಿ ಪರೀಕ್ಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸೇವೆಗಳಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಯುಪಿಎಸ್ಸಿ ಅಂಥಹ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಮುಖ್ಯತೆಯನ್ನು ಅರಿಯುವಲ್ಲಿ ಯುವಸಮೂಹ ಹಿಂದೆ ಬಿದ್ದಿರುವುದು ನಮ್ಮ ರಾಜ್ಯಕ್ಕೆ ಆಗುವ ನಷ್ಟ. ಕೇಂದ್ರ ಸೇವೆಯ ಅಧಿಕಾರದಲ್ಲಿ ಕನ್ನಡಿಗರಿದ್ದರೆ ರಾಜ್ಯದ ಬೊಕ್ಕಸಕ್ಕೆ ಹಣ ಬರುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಅಭಿವೃದ್ಧಿಯ ಕೆಲಸಗಳಾಗಲಿವೆ ಎಂದು ಹೇಳಿದರು.

ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಬಂದಾಗಲೇ ಆಡಳಿತ, ಅಧಿಕಾರ ಸ್ಥಾನಮಾನದ ಬೆಲೆ ಅರಿತು ಸುಖಾಪೇಕ್ಷೆಗಳನ್ನು ತ್ಯಾಗ ಮಾಡಿ, ಸ್ಪರ್ಧಾತ್ಮಕ ಗುಣ ಬೆಳೆದು, ಸೇವಾ ಮನೋಭಾವದ ಪ್ರೇರಣೆಯಾಗಿ ಯುಪಿಎಸ್ಸಿ ಅಂಥಹ ಸವಾಲನ್ನು ಎದುರಿಸಿ ಗೆಲುವು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.

ಪ್ರತೀ ಯಶಸ್ಸಿಗೂ ಪ್ರೇರಣೆ ಮುಖ್ಯ. ನಮ್ಮ ಎದುರಲ್ಲೇ ಸಾಕಷ್ಟು ಉದಾಹರಣೆಗಳಿವೆ. ಮೆಡಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ರ್ಯಾಂಕ್ ಪಡೆದು ಯಶಸ್ಸು ಸಾಧಿಸುತ್ತಿದ್ದಾರೆ. ಗ್ರಾಮೀಣ ಭಾಗದ, ಕನ್ನಡ ಹಿನ್ನಲೆ ಇರುವ ವಿದ್ಯಾರ್ಥಿಗಳೂ ಯುಪಿಎಸ್ಸಿ ಪಾಸ್ ಮಾಡಬಹುದು. ಮೂರು ಹಂತಗಳ ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಹಂತ ಪ್ರಿಲಿಮ್ಸ್ ಕ್ಲಿಯರ್ ಆಗಬೇಕಾದರೆ ಕನ್ನಡ, ಇಂಗ್ಲೀಷ್ ದಿನಪತ್ರಿಕೆ ಓದುವುದು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಪ್ರೊ.ಡಿ.ವಿ.ಪರಮಶಿವಮೂರ್ತಿ, ಡಾ.ಪಿ.ಎಂ.ಗಂಗಾಧರಯ್ಯ, ಡಾ.ನಾಗಭೂಷಣ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!