ಕುಣಿಗಲ್: ವಾಡಿಕೆ ಮಳೆ, ಅಕಾಲಿಕ ಮಳೆ ಸೇರಿ ಕುಣಿಗಲ್ ದೊಡ್ಡಕೆರೆ ಪೂರ್ತಿಯಾಗಿ ನಾಲ್ಕು ತಿಂಗಳಿನಿಂದ ಕೋಡಿ ಹರಿದರು ಅಚ್ಚುಕಟ್ಟುದಾರರಿಗೆ ಕೃಷಿ ಉದ್ದೇಶಕ್ಕೆ ನೀರು ಪೂರೈಕೆ ಮಾಡುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪೂರಕ ಕ್ರಮ ಕೈಗೊಳ್ಳದೆ ಇರುವುದು ಅಚ್ಚುಕಟ್ಟುದಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಕಳೆದ ಕೆಲದಶಕಗಳ ಹಿಂದೆ ಕುಣಿಗಲ್ ದೊಡ್ಡಕೆರೆ ಅಚ್ಚುಕಟ್ಟು ಹಸಿಭತ್ತ, ಬಿಸಿಬೆಲ್ಲಕ್ಕೆ ಹೆಸರುವಾಸಿಯಾಗಿತ್ತು. ವರ್ಷಪೂರ್ತಿ ಹಚ್ಚಹಸಿರಿನಿಂದ ಅಚ್ಚುಕಟ್ಟು ಕಂಗೊಳಿಸುತ್ತಿತ್ತು. ಅದರೆ ಕಳೆದ 15 ವರ್ಷಗಳಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರುಬಿಡದ ಕಾರಣ, ವ್ಯಾಪಕ ನಗರೀಕರಣದ ಪ್ರಭಾವದಿಂದಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರುಹರಿಸುವ ಲಕ್ಷ್ಮೀದೇವಿ ಹಂತದ ಕಾಲುವೆ ಪಟ್ಟಣದ ಕೊಳಚೆ ನೀರು ಹರಿಸುವ ತಾಣವಾಗಿ ಮಾರ್ಪಾಟಾಗಿದೆ. ಕೆರೆಯಲ್ಲಿ ನೀರಿದ್ದರೂ ಅಚ್ಚುಕಟ್ಟು ಪ್ರದೇಶಕ್ಕೆ ನೀರುಹರಿಸುವ ಇಚ್ಛಾಶಕ್ತಿ ಕಳೆದ 15 ವರ್ಷಗಳಿಂದ ಯಾವುದೇ ರಾಜಕಾರಣಿ ವ್ಯಕ್ತಪಡಿಸದ ಕಾರಣ ಇಂದು ಅಚ್ಚುಕಟ್ಟುಪ್ರದೇಶ ಅರೆನೀರಾವರಿ ವ್ಯವಸ್ಥೆಗೆ ಹೊಂದುಕೊಳ್ಳುವಂತಾಗಿ ಬಹುತೇಕ ಪ್ರದೇಶಗಳು ಕೃಷಿ ಉದ್ದೇಶದಿಂದ ವಸತಿ ಉದ್ದೇಶಕ್ಕೆ ಪರಿವರ್ತನೆಗೆ ಮುಂದಾಗುತ್ತಿದೆ.
ದೊಡ್ಡಕೆರೆಯಿಂದ ಲಕ್ಷ್ಮೀದೇವಿ ಹಂತ ಹಾಗೂ ರಾಮಬಾಣದ ಹಂತ ಎಂಬ ಎರಡು ಕಾಲುವೆ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಾಗುತ್ತದೆ. 1022 ಎಕರೆ ಇರುವ ದೊಡ್ಡಕೆರೆಯು 550 ಎಂಸಿಎಫ್ಟಿ (ಅರ್ಧಟಿಎಂಸಿ) ಸಂಗ್ರಹ ಸಾಮಾರ್ಥ್ಯ ಇದೆ. ಒಟ್ಟಾರೆ 2800 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು ಹತ್ತಾರ ಗ್ರಾಮಗಳ ಜಮೀನಿಗೆ ಕೃಷಿ ಉದ್ದೇಶಕ್ಕೆ ನೀರು ಪೂರೈಕೆ ತಾಣವಾಗಿದೆ. ಲಕ್ಷ್ಮೀದೇವಿಹಂತದ ಕಾಲುವೆಯಲ್ಲಿ ಸತತ ನೀರುಹರಿಯುತ್ತಿದ್ದ ಕಾರಣ ಈ ಕಾಲುವೆಯನ್ನು ಅವಲಂಬಿಸಿದ ಜಮೀನು ಮಾಲೀಕರ ಮನೆಯಲ್ಲಿ ಲಕ್ಷ್ಮೀತಾಂಡವ ವಾಡುತ್ತಿದ್ದಳು ಎಂಬ ಪ್ರತೀತಿ ಇತ್ತು. ಅದರೆ, ಹೇಮಾವತಿ ನೀರು 2001-02ರಲ್ಲಿ ದೊಡ್ಡಕೆರೆಗೆ ಹರಿದುಬಂದಿತು. ನಂತರ ಕೆಲವರ್ಷ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿದ್ದು ಇದೀಗ ಕಳೆದ 15 ವರ್ಷ ಕಳೆದರೂ ನೀರು ಹರಿಸಿಲ್ಲ. ಕಳೆದನಾಲ್ಕು ತಿಂಗಳಿನಿಂದ ಹೇಮೆ ಸೇರಿದಂತೆ ವರುಣ ಕೃಪೆಯಿಂದ ಯಥೇಚ್ಚ ನೀರು ಹರಿದು ಬಂದರೂ ಕೋಡಿಮೂಲಕ ತೋರೆಗೆ ಹರಿದುಹೋಗುತ್ತಿದ್ದು ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡದ ಕಾರಣ ಕೃಷಿ ಅವಲಂಬಿಸಿರುವ ಅಚ್ಚುಕಟ್ಟುದಾರರು ಅಗತ್ಯ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
550 ಎಂಸಿಎಫ್ಟಿ ಸಾಮಾರ್ಥ್ಯದ ದೊಡ್ಡಕೆರೆಯಲ್ಲಿ 2003-04ರಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪುರೈಕೆ ಮಾಡಲು 50 ಎಂಸಿಎಫ್ಟಿ ಮೀಸಲು ಮಾಡಲಾಗಿತ್ತು. ಉಳಿಕೆ ಹೇಮಾವತಿ ನಾಲಾ ಮೂಲ ಯೋಜನೆಯಂತೆ ಕೃಷಿ ಉದ್ದೇಶಕ್ಕೆ ಇತ್ತು. ಅದರೆ ಕಳೆದ ಕೆಲವರ್ಷಗಳ ಹಿಂದೆ ದೊಡ್ಡಕೆರೆಯ 450 ಎಂಸಿಎಫ್ಟಿ ನೀರನ್ನು ಪೂರ್ಣವಾಗಿ ಕುಡಿಯುವ ನೀರಿನ ಉದ್ದೇಶಕ್ಕೆ ಇಡಲಾಗಿದೆ ಎಂದು ಹೇಳಲಾಗುತ್ತಿದ್ದು ಅಚ್ಚುಕಟ್ಟು ರೈತರ ಬವಣೆ ಹೇಳತೀರದಾಗಿದೆ.
ಕಳೆದ 15ವರ್ಷಗಳಿಂದ ಅಚ್ಚುಕಟ್ಟುಪ್ರದೇಶಕ್ಕೆ ನೀರು ಬಿಟ್ಟಿಲ್ಲ. 4 ತಿಂಗಳಲ್ಲಿ ತೊರೆಯಲ್ಲಿ ಹೋದ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಬಿಟ್ಟಿದ್ದಲ್ಲಿ ರಾಗಿಬೆಳೆಯನ್ನಾದರೂ ಬೆಳೆಯುತ್ತಿದ್ವಿ. ಇನ್ನಾದರೂ ಸಂಬಂಭಪಟ್ಟವರು ಈ ನಿಟ್ಟಿನಲ್ಲಿ ಗಮನಹರಿಸಲಿ ಎಂದು ಅಚ್ಚುಕಟ್ಟುದಾರ ರೈತ ಕೃಷ್ಣಪ್ಪ ಅಗ್ರಹಿಸಿದ್ದಾರೆ.
ಹೇಮಾವತಿ ನಾಲಾವಲಯದ ಎಇಇ ರವಿ, ದೊಡ್ಡಕೆರೆಯ ನೀರನ್ನು ಸಂಪೂರ್ಣವಾಗಿ ಕುಡಿಯಲು ಮೀಸಲಿರಿಸಲಾಗಿರುವುದರಿಂದ ಮೊದಲು ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಿ, ಉಳಿದಲ್ಲಿ ಕೃಷಿಗೆ ನೀರು ಕೊಡಬೇಕು. ಈಗಾಗಲೆ ಪಟ್ಟಣ ಸೇರಿದಂತೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಳವಡಿಸಿರುವುದರಿಂದ ಕೆರೆ ನೀರು ಕೃಷಿ ಉದ್ದೇಶಕ್ಕೆ ಬಿಡಲು ಮೇಲಾಧಿಕಾರಿಗಳು ಹಾಗೂ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನವಾಗಬೇಕು ಎನ್ನುತ್ತಾರೆ.
ಅಚ್ಚುಕಟ್ಟುದಾರ ರೈತ ದಿನೇಶಕುಮಾರ್, ಹೇಮಾವತಿ ನಾಲಾ ಮೂಲ ಯೋಜನೆಯಲ್ಲೆ ದೊಡ್ಡಕೆರೆ ಕೃಷಿ ಉದ್ದೇಶ ಎಂದು ಇರುವಾಗ ಈಗ ದೊಡ್ಡಕೆರೆ ನೀರನ್ನು ಪೂರ್ತಿ ಕುಡಿಯುಲು ಮೀಸಲು ಮಾಡಿರುವ ಅವೈಜ್ಞಾನಿಕ ಕ್ರಮ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ದೊಡ್ಡಕೆರೆ ಅವಲಂಬಿಸಿರುವ ಅಚ್ಚುಕಟ್ಟುದಾರರು ನೀರಾವರಿ ಸೌಕರ್ಯ ಇಲ್ಲದೆ ಏನು ಮಾಡಬೇಕೆಂಬ ಚಿಂತೆಯಲ್ಲಿ ಕಾಲದೂಡುವಂತಾಗಿದ್ದು ಹಸಿಭತ್ತ, ಬಿಸಿಬೆಲ್ಲದ ಖ್ಯಾತಿ ಮರಳಲು ಸಂಬಂಭಪಟ್ಟವರು ಎಚ್ಚೆತ್ತು ಅಚ್ಚುಕಟ್ಟುಪ್ರದೇಶಕ್ಕೆ ನೀರು ಪೂರೈಕೆ ಮಾಡಲು ಮುಂದಾಗಬೇಕೆಂದು ಅಗ್ರಹಿಸಿದ್ದಾರೆ.
Comments are closed.