ತಿಪಟೂರು: ಸಮಾಜ ಸೇವೆ ಮಾಡುತ್ತಾ ತಿಪಟೂರು ತಾಲ್ಲೂಕಿನಾದ್ಯಂತ ಸಂಚರಿಸಿ ಜನರ ಸಮಸ್ಯೆ ಆಲಿಸಿದ್ದೇನೆ. ನೀರಿನ ಬವಣೆ ಎದುರಾದಾಗ ಟ್ಯಾಂಕರ್ ಮೂಲಕ ನೀರು ಒದಗಿಸಿದ್ದೇನೆ. ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆಗೆ ನೆರವಾಗಿದ್ದೇನೆ. ಕೊರೊನಾ ಸಂದರ್ಭದಲ್ಲಿ ಆಹಾರದ ಕಿಟ್ ವಿತರಿಸಿದ್ದೇನೆ. ಸಾಮಾಜಿಕವಾಗಿ ರೈತರ ಪರ, ಜನರಪರವಾಗಿ ಧ್ವನಿ ಎತ್ತಿದ್ದೇನೆ. ಸಮಾಜ ಸೇವೆಯನ್ನೆ ಗುರಿಯಾಗಿಸಿಕೊಂಡಿರುವುದು ನನಗೆ ಆತ್ಮತೃಪ್ತಿ ನೀಡಿದೆ ಎಂದು ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ನುಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಕಾಂಗ್ರೆಸ್ ಮುಖಂಡನಾಗಿ ಜನರಿಗೆ ಪರಿಚಯ ಇದ್ದೇನೆ. ಕಾಂಗ್ರೆಸ್ ನ ನಾಯಕರ ಅಣತಿಯಂತೆ ಪಕ್ಷ ಸಂಘಟನೆ ಮಾಡಿದ್ದೇನೆ. ಇದೀಗ 2023 ಸಾರ್ವತ್ರಿಕ ಚುನಾವಣೆ ಎದುರಾಗುತ್ತಿದ್ದು ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಹಿರಿಯ ನಾಯಕರು ನುಡಿದಿದ್ದರು ಎಂದರು.
ತಾಲ್ಲೂಕು ಜೆಡಿಎಸ್ ಮುಖಂಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿ ತಿಪಟೂರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು, ಒಡನಾಡಿಗಳು, ಅಭಿಮಾನಿಗಳೊಂದಿಗೆ ಅಂತಿಮವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಕೆ.ಟಿ.ಶಾಂತಕುಮಾರ್ ತಿಳಿಸಿದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ಅಧಿಕಾರ ಪಡೆದು ಸೇವೆ ಮಾಡಲಾಗದಂತಹ ಸಾಮಾಜಿಕ ಸೇವೆಗಳನ್ನು ಅಧಿಕಾರವಿಲ್ಲದೆ ಸೇವೆ ಮಾಡಿ ತಾಲ್ಲೂಕಿನಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. ಕೆ.ಟಿ.ಶಾಂತಕುಮಾರ್ಗೆ ಟಿಕೆಟ್ ನೀಡುವಂತೆ ಗ್ರಾಮಾಂತರದಲ್ಲಿ ಒತ್ತಾಯ ಕೇಳಿ ಬರುತ್ತಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಇಂತಹ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಕೆಟಿಎಸ್ ಅಂತಹ ನಾಯಕರು ನಮ್ಮೊಂದಿಗೆ ಇರಬೇಕು ಎಂದು ಪಕ್ಷಕ್ಕೆ ಆಹ್ವಾನಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯೆ ರಾಧಾ ನಾರಾಯಣಗೌಡ, ಕೆರೆಗೋಡಿ ಯೋಗಾನಂದ, ಕುಮಾರ್, ಗೋವಿಂದರಾಜು, ಜಗದೀಶ್, ರಾಕೇಶ್, ಬಾಳೆಕಾಯಿ ಮಲ್ಲಿಕಾರ್ಜುನ್, ರಾಜಶೇಖರ್ ಮುಂತಾದವರಿದ್ದರು.
Comments are closed.