ಗುಬ್ಬಿ: ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಘಟಕದಲ್ಲಿ ಸಾಕಷ್ಟು ಪ್ಲಾಸ್ಟಿಕ್ ತ್ಯಾಜ್ಯ ಇದ್ದುದರಿಂದ ಬೆಂಕಿ ಬಿದ್ದ ತಕ್ಷಣ ಸುತ್ತಮುತ್ತಲೂ ದುರ್ವಾಸನೆಯುಕ್ತ ಹೊಗೆ ಆವರಿಸಿಕೊಂಡಿದ್ದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.
ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಪಟ್ಟಣ ಪಂಚಾಯಿತಿ ವತಿಯಿಂದ ಖರೀದಿಸಿರುವ ಕಸ ಬೇರ್ಪಡಿಸುವ ಯಂತ್ರ ಅಳವಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅವರಿಗೆ ಸೂಚಿಸಲಾಗುವುದು ಎಂದ ಅವರು ಬೇಸಿಗೆ ಸಮೀಪಿಸುತ್ತಿರುವುದರಿಂದ ಸಾರ್ವಜನಿಕರು ಕಸ ಸಂಗ್ರಹ ಟ್ರ್ಯಾಕ್ಟರ್ನಲ್ಲಿ ಬೂದಿ ಇತ್ಯಾದಿ ಹಾಕುವಾಗ ಜಾಗ್ರತೆಯಿಂದ ಇರಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ್ ಮಾತನಾಡಿ, ಸರ್ಕಾರ ಈ ಯೋಜನೆಗಾಗಿ ಕೋಟ್ಯಂತರ ರೂ. ವ್ಯಯಿಸಿದ್ದು, ಅಧಿಕಾರಿಗಳ ನಿರ್ಲಕ್ಷದಿಂದಾಗಿ ಎಲ್ಲವೂ ವ್ಯರ್ಥವಾಗುತ್ತಿದೆ. ಇದನ್ನು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತೇವೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೊಂದಿಕೊಂಡಂತೆ ಅರಣ್ಯ ಪ್ರದೇಶ ಇರುವುದರಿಂದ ಬೆಂಕಿ ಅವಘಡ ಸಂಭವಿಸಿದರೆ ಸಾಕಷ್ಟು ಅನಾಹುತ ಸಂಭವಿಸಲಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಇದ್ದು ಇದನ್ನು ಗಮನಿಸುತ್ತಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಮೊಹಮ್ಮದ್ ಸಾದಿಕ್ ಹಾಗೂ ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ, ಇಂಜಿನಿಯರ್ ಬಿಂದುಸಾರ ಆಗಮಿಸಿ ಪರಿಶೀಲಿಸಿದರು.
Comments are closed.