ಕುಣಿಗಲ್: ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನಿಟ್ಟಿನಲ್ಲಿ ಸಣ್ಣ, ದೊಡ್ಡ ಹಿಡುವಳಿದಾರ ಎಂದು ವಿಂಗಡನೆ ಮಾಡಿ ರೈತರಲ್ಲೂ ಭೇದ ಭಾವ ಮಾಡಿದ ಕೀರ್ತಿ ಬಿಜೆಪಿ ಸರ್ಕಾರದ್ದಾಗಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಬುಧವಾರ ಸಂಜೆ ಪಟ್ಟಣದ ಆರ್ಎಂಸಿ ಯಾರ್ಡ್ನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲೆ ತುಮಕೂರು ಜಿಲ್ಲೆ ಅತಿಹೆಚ್ಚು ರಾಗಿ ಬೆಳೆಯುವ ಜಿಲ್ಲೆಯಾಗಿದ್ದು ಕುಣಿಗಲ್ ತಾಲೂಕು ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾರಿ ತಂದಿದ್ದು ಅಲ್ಲದೆ ರೈತನಿಗೆ ನೇರವಾಗಿ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ಕಾಂಗ್ರೆಸ್ ಜಾರಿಗೆ ತಂದಿತ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ರೈತರು ಕಷ್ಟಪಟ್ಟು ಬೆಳೆದ ರಾಗಿ ಖರೀದಿ ಮಾಡಲು ತಾರತಮ್ಯ ಮಾಡಿಲ್ಲ. ಬಿಜೆಪಿ ಸಣ್ಣ, ಬೃಹತ್ ಹಿಡುವಳಿದಾರ ಎಂದು ವಿಂಗಡನೆ ಮಾಡಿದೆ. ಸರ್ಕಾರದ ನಡೆ ಖಂಡನೀಯ, ಅಧಿವೇಶನದಲ್ಲಿ ಸರ್ಕಾರದ ತಾರತಮ್ಯ ಖಂಡಿಸಿ ಹೋರಾಟ ಮಾಡಿದರೂ ಸರ್ಕಾರ ದುಡ್ಡಿಲ್ಲ ಎಂದು ಹೇಳಿದೆ ಎಂದರು.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಗೆ ನೋಂದಣಿ ಮಾಡಿಸಿರುವ ರೈತರು ಕೇಂದ್ರಕ್ಕೆ ರಾಗಿ ಹಾಕಿದ ಕೂಡಲೆ ಗ್ರೈನ್ ಓಚರ್ ಮರೆಯದೆ ಪಡಯಬೇಕೆಂದು. ಖರೀದಿ ಕೇಂದ್ರದಲ್ಲಿ ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿ, ರಾಗಿ ಹಾಕಲು ಬರುವ ರೈತರಿಗೆ ಅಗತ್ಯ ನೀರು, ನೆರಳು, ಉಪಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, 2022- 23ನೇ ಸಾಲಿಗೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿಗೆ ಜಿಲ್ಲೆಯೆಲ್ಲಿ 11 ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು ಕುಣಿಗಲ್ ತಾಲೂಕಿನಲ್ಲಿ ಎರಡು ಕೇಂದ್ರ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 62,602 ರೈತರು ನೋಂದಣಿ ಮಾಡಿಸಿದ್ದು, ತಾಲೂಕಿನಲ್ಲಿ 13930 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ. 1,92,237ಕ್ವಿಂಟಾಲ್ ರಾಗಿ ಖರೀದಿ ನಿರೀಕ್ಷೆ ಇದೆ. ಕಳೆದ ಬಾರಿ ಕುಣಿಗಲ್ ತಾಲೂಕಿನಲ್ಲಿ 1,87,700 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿತ್ತು ಎಂದ ಅವರು, ರಾಗಿ ಖರೀದಿ ಕೇಂದ್ರದಲ್ಲಿ ಈ ಬಾರಿ ಚೀಲ ಸರ್ಕಾರವೆ ಪೂರೈಕೆ ಮಾಡಿದ್ದು ರೈತ ತಂದ ರಾಗಿಯನ್ನು ಇಲಾಖೆ ಪೂರೈಕೆ ಮಾಡುವ ಚೀಲಗಳಿಗೆ ತುಂಬಿಸಿ ಪೂರೈಕೆ ಮಾಡಬೇಕಿರುವ ಕಾರಣ ರೈತರು ಸಹಕಾರ ನೀಡಬೇಕು. ಯಾವುದೇ ಸಮಸ್ಯೆ ಇದ್ದಲ್ಲಿ ರೈತರು ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನೂರ್ಅಜಾಮ್, ಆಹಾರ ನಿಗಮ ನಿಯಮಿತ ನಿಗಮದ ಜಿಲ್ಲಾ ವವ್ಯಸ್ಥಾಪಕ ಶ್ರೀಧರ್, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕ ಡಾ.ರಾಘವೇಂದ್ರ, ಎಪಿಎಂಸಿ ಕಾರ್ಯದರ್ಶಿ ವೆಂಕಟೇಶ್, ಗೋದಾಮು ವ್ಯವಸ್ಥಾಪಕ ಕೃಷ್ಣಮೂರ್ತಿ, ಆಹಾರ ನಿರೀಕ್ಷಕ ಪ್ರಸಾದ್ ಇತರರು ಇದ್ದರು.
Comments are closed.