ತುಮಕೂರು: ಸಮಾಜಕ್ಕಾಗಿ ದುಡಿದವರನ್ನು ಈ ಜಗತ್ತು ಎಂದಿಗೂ ಮರೆಯುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ವ್ಯಕ್ತಿಗತ ಬೆಳವಣಿಗೆಯ ಜೊತೆಗೆ, ಈ ಸಮಾಜದ ಅಭಿವೃದ್ಧಿಗೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ತಿಳಿಸಿದ್ದಾರೆ.
ನಗರದ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಎಸ್ಎಸ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಏಳಿಗೆಗಾಗಿ ದುಡಿದಂತಹ ಮಹಾತ್ಮ ಗಾಂಧಿ, ಬುದ್ದ, ಬಸವ, ಅಂಬೇಡ್ಕರ್, ಅಬ್ದುಲ್ ಕಲಾಂ ಇಂತಹವರನ್ನು ನಾಡಿನ ಜನತೆ ಇಂದಿಗೂ ಸ್ಮರಿಸುತ್ತಿದ್ದಾರೆ. ಹಾಗಾಗಿ ಮಕ್ಕಳು ಇವರು ಆದರ್ಶವಾಗಿಟ್ಟುಕೊಂಡು ಸಮಾಜಸೇವೆಯಲ್ಲಿ ತೊಡಗುವಂತೆ ಸಲಹೆ ನೀಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಉತ್ತಮ ಅಂಕದ ಜೊತೆಗೆ, ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಿದೆ. ಆಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಉತ್ತಮ ಅಂಕಗಳು ನಿಮಗೆ ಒಳ್ಳೆಯ ಉದ್ಯೋಗ, ಕೈತುಂಬ ವೇತನ ದೊರಕಿಸಬಹುದು. ಹಾಗೂ ಒಳ್ಳೆಯ ವ್ಯಕ್ತಿತ್ವ ನೀವು ಮಾಡುವ ಕೆಲಸದಲ್ಲಿ ಉನ್ನತಿಗೆ ಹೋಗಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳು ಅಂಕಗಳ ಜೊತೆಗೆ, ಒಳ್ಳೆಯ ವ್ಯಕ್ತಿತ್ವ ರೂಢಿಸಿಕೊಳ್ಳುವಂತೆ ಪಿಯು ಡಿಡಿಪಿಐ ಗಂಗಾಧರ್ ಕರೆ ನೀಡಿದರು.
ಕಲಾಶ್ರೀ ಡಾ.ಲಕ್ಷಣದಾಸ್ ಮಾತನಾಡಿ, 1985ರಿಂದ ಇದುವರೆಗೂ ಒಂದಿಲೊಂದು ರೀತಿಯಲ್ಲಿ ಈ ಕಾಲೇಜಿಗೂ ನನಗೂ ಅವಿನಾಭಾವ ಸಂಬಂಧವಿದೆ. ಬ್ರಿಟಿಷರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಂಪ್ರೆಸ್ (ಚಕ್ರವರ್ತಿನಿ) ಎಂಬ ಹೆಸರಿನಲ್ಲಿ ಈ ಶಾಲೆ ತೆರೆದಿದ್ದು, ದೇಶದಲ್ಲಿ ಈ ಹೆಸರಿನಿಂದ ಕರೆಯಲ್ಪಡುತ್ತಿರುವ ಏಕೈಕ ಶಾಲೆ ಇದಾಗಿದೆ. ಸಾವಿರಾರು ವಿದ್ಯಾರ್ಥಿನಿಯರು ಇಲ್ಲಿಂದ ಕಲಿತು, ದೇಶದ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ. ತುಮಕೂರು ನಗರ ಹಾಗೂ ಸುತ್ತಮುತ್ತ ಗ್ರಾಮೀಣ ಭಾಗದ ಬಡ ಮಕ್ಕಳಿಗಾಗಿಯೇ ಈ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು ತಮ್ಮ ಪೋಷಕರ ಆಶಯ ಅರಿತು, ಗುರುಗಳ ಮಾರ್ಗದರ್ಶನದಲ್ಲಿ ಅವುಗಳನ್ನು ಈಡೇರಿಸಲು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಷಣ್ಮುಖ ಮಾತನಾಡಿ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೇ ಮೀಸಲಿರುವ ನಮ್ಮ ಎಂಪ್ರೆಸ್ ಶಾಲೆಯಲ್ಲಿ 2500 ಮಕ್ಕಳು ಕಲಿಯುತ್ತಿದ್ದು, ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಎಲ್ಲಾ ಮಕ್ಕಳಿಗೂ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷಾ ಪದ್ಧತಿ ಬದಲಾಗಿದ್ದು, ಇದಕ್ಕೆ ಬೇಕಾದ ತರಬೇತಿಯನ್ನು ಎಲ್ಲಾ ದ್ವಿತೀಯ ಪಿಯು ಮಕ್ಕಳಿಗೆ ನೀಡಿ, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಮಕ್ಕಳು ಇದನ್ನು ಅರ್ಥ ಮಾಡಿಕೊಂಡು ಚಾಚು ತಪ್ಪದೆ ಎಲ್ಲಾ ತರಗತಿಗಳನ್ನು ಕೇಳಿ ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿ ತರಬೇಕೆಂಬ ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ಸೇವಾದಳ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಕೆ.ಸಿ.ರಾಧ, ಸದಸ್ಯ ನವೀನ್ಕುಮಾರ್.ಆರ್, ಉಪನ್ಯಾಸಕರಾದ ಡಾ.ಹೆಚ್.ಎಂ.ಸದಾಶಿವಯ್ಯ, ಆಶಾ, ಆರ್.ಬಿ.ಚಂದ್ರಶೇಖರ್, ಎ.ಜಿ.ಪ್ರಸನ್ನ, ಡಾ.ಎ.ಓ.ನರಸಿಂಹ ಮೂರ್ತಿ, ಸೌಭಾಗ್ಯ, ಶಿವಪ್ಪ, ಪ್ರಕಾಶ್ ಹಾಗೂ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು. ಸಾಂಸ್ಕೃತಿಕ ಸಮಾರಂಭದ ಸಮಾರೋಪದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಸೀರೆಯುಟ್ಟು ಕಂಗೊಳಿಸಿದರೆ, ಶಿಕ್ಷಕರು ಪಂಚೆ, ಶಲ್ಯ ತೊಟ್ಟು ವಿಶೇಷವಾಗಿ ಕಂಡು ಬಂದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
Comments are closed.