ಡಬಲ್ ಇಂಜಿನ್ ಸರ್ಕಾರ ದುರಾಡಳಿತ ನಡೆಸ್ತಿದೆ: ಪರಂ

ತುಮಕೂರಿನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಜ.24ಕ್ಕೆ

1,244

Get real time updates directly on you device, subscribe now.


ತುಮಕೂರು: ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್ ಇಂಜಿನ್ ಸರಕಾರದ ದುರಾಡಳಿತ ಮತ್ತು ಜನವಿರೋಧಿ ನೀತಿಗಳನ್ನು ಮನೆ ಮನೆಗೆ ತಿಳಿಸುವ ನಿಟ್ಟಿನಲ್ಲಿ ಕೆಪಿಸಿಸಿ ವತಿಯಿಂದ ಕೈಗೊಂಡಿರುವ ಪ್ರಜಾಧ್ವನಿ ಬಸ್ ಯಾತ್ರೆ ಜನವರಿ 24 ರಂದು ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಗೆಲುವು ಸಾಧಿಸಲಿದೆ ಎಂಬ ಸಂದೇಶ ಜನರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಎಲ್ಲಾ ಮುಖಂಡರ ತೀರ್ಮಾನದಂತೆ ಹಮ್ಮಿಕೊಂಡಿರುವ ಪ್ರಜಾಧ್ವನಿ ಬಸ್ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಚಿತ್ರದುರ್ಗದಲ್ಲಿ ನಡೆದ ಐಕ್ಯತಾ ಸಮಾವೇಶ ಮತ್ತು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ನಾ ನಾಯಕಿ’ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಇಡೀ ರಾಜ್ಯಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ. ಅದೇ ರೀತಿಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸಂದೇಶ ತುಮಕೂರಿನಿಂದಲೇ ಕಳುಹಿಸುವ ಕೆಲಸ ಆಗಬೇಕಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ನಡೆಸುವ ಯಾತ್ರೆಗಳಿಗೆ ಒಂದು ಐತಿಹಾಸಿಕ ಮಹತ್ವವಿದೆ. 1989ರಲ್ಲಿ ವೀರೇಂದ್ರ ಪಾಟೀಲ್ ಅವರು ತುಮಕೂರಿನ ಗ್ರಂಥಾಲಯ ಮೈದಾನದಿಂದ ಯಾತ್ರೆ ಆರಂಭಿಸಿ, ಅಂದಿನ ಜನತಾದಳ ಸರಕಾರದ ದುಡಾಳಿತವನ್ನು ಜನತೆಗೆ ತಿಳಿಸಿದ ಪರಿಣಾಮ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 181 ಸೀಟು ಪಡೆದು ಸರಕಾರ ರಚನೆ ಮಾಡಿತ್ತು. 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ತುಮಕೂರಿನಿಂದಲೇ ಆರಂಭವಾದ ಪಾಂಚಜನ್ಯ ಯಾತ್ರೆಯ ಫಲವಾಗಿ 131 ಸೀಟು ಪಡೆದವು. ಜನವರಿ 24 ರ ಮಂಗಳವಾರ ಜಿಲ್ಲೆಯಲ್ಲಿ ಪ್ರಜಾಧ್ವನಿ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ. ಈ ಬಾರಿಯೂ ಸಹ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ನೀಡಲಿದ್ದಾರೆ ಎಂಬ ನಂಬಿಕೆ ನಮಗಿದೆ. ಹಾಗಾಗಿ ಕಾಂಗ್ರೆಸ್ ನ ಕಾರ್ಯಕ್ರಮಗಳು, ಬಿಜೆಪಿಯ ದುರಾಡಳಿತವನ್ನು ಜನತೆಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು, ಅದರಲ್ಲಿಯೂ ನಾ ನಾಯಕಿ ಕಾರ್ಯಕ್ರಮದ ಮೂಲಕ ಸ್ಪೂರ್ತಿ ಪಡೆದ ಮಹಿಳಾ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ವಿಧಾನಸೌಧ ಮತ್ತು ವಿಕಾಸಸೌಧದ ಪ್ರತಿ ಕಂಬವೂ ಶೇ.40 ಕಮಿಷನ್ ಬಗ್ಗೆ ಹೇಳುತ್ತದೆ. ಐಕ್ಯತಾ ಸಮಾವೇಶದಲ್ಲಿ ನೀಡಿದ ಘೋಷಣೆಯಂತೆ 1-5ನೇ ತರಗತಿಯ ಮಕ್ಕಳಿಗೆ ಮಾಸಿಕ 150 ರೂ, 6 ರಿಂದ 10 ತರಗತಿಯವರೆಗಿನ ಮಕ್ಕಳಿಗೆ ತಲಾ 300 ರೂ. ನೀಡುವ ಭರವಸೆ ನೀಡಲಾಗಿದೆ. ನಾ ನಾಯಕಿ ಸಮಾವೇಶದಲ್ಲಿ ಪ್ರತಿ ಕುಟುಂಬದ ಮಹಿಳೆಗೆ 2000 ರೂ. ಮಾಸಿಕ ನಗದು ಹಾಗೂ 200 ಯೂನಿಟ್ ವಿದ್ಯುತ್ ಉಚಿತ ನೀಡುವ ಘೋಷಣೆ ಮಾಡಿದೆ. ಈ ಘೋಷಣೆಗಳಿಗಾಗಿ ವಾರ್ಷಿಕ 24 ಸಾವಿರ ಕೋಟಿ ರೂ. ಬೇಕಾಗುತ್ತವೆ. ಹಣವನ್ನು ತರುವ ದಾರಿ ನಮಗೆ ತಿಳಿದಿದೆ. ಹಾಗಾಗಿಯೇ ಈ ಘೋಷಣೆ ಮಾಡಿದ್ದೇವೆ. ಇದನ್ನು ಪ್ರತಿ ಮನೆಗೂ ತಲುಪಿಸಿ ಎಂದು ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.

ಮಾಜಿ ಶಾಸಕ ಡಾ.ಎಸ್.ರಫಿಕ್ ಅಹಮದ್ ಮಾತನಾಡಿ, ಕೆಪಿಸಿಸಿ ವತಿಯಿಂದ ಕೈಗೊಂಡಿರುವ ಈ ಪ್ರಜಾಧ್ವನಿ ಬಸ್ ಯಾತ್ರೆ, ಐಕ್ಯತಾ ಸಮಾವೇಶ ಹಾಗೂ ನಾ ನಾಯಕಿ ಕಾರ್ಯಕ್ರಮದ ರೀತಿಯಲ್ಲಿಯೇ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಗಾಜಿನ ಮನೆಯಲ್ಲಿ ಕಾರ್ಯಕ್ರಮ ಮಾಡಲು ತೀರ ಚಿಕ್ಕದಾಗುವ ಕಾರಣ ಸ್ಥಳ ಪರಿಶೀಲನೆ ನಡೆಯುತ್ತಿದೆ. ರಾಜ್ಯ ವೀಕ್ಷಕರು ಮತ್ತು ಜಿಲ್ಲೆಯ ಮುಖಂಡರು ನೀಡುವ ನಿರ್ದೇಶನದಂತೆ ಕಾರ್ಯಕ್ರಮದ ಯಶಸ್ವಿಗೆ ದುಡಿಯುವುದಾಗಿ ತಿಳಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮತ್ತು ಮಾಜಿ ಶಾಸಕ ಕೆ.ಷಡಕ್ಷರಿ, ಜಿಲ್ಲಾ ಉಸ್ತುವಾರಿಗಳಾದ ಮಂಜುಳಾ ನಾಯ್ಡು, ವೇಣುಗೋಪಾಲ್, ಎಂಎಲ್ಸಿ ಗೋವಿಂದರಾಜು ಅವರು ಪ್ರಜಾಧ್ವನಿ ಬಸ್ ಯಾತ್ರೆ ಯಶಸ್ವಿಗೊಳಿಸುವ ಕುರಿತು ಪಕ್ಷದ ಮುಖಂಡರಿಗೆ ಸಲಹೆ ಸೂಚನೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಎಸ್.ಷಫಿ ಅಹಮದ್, ಲಕ್ಕಪ್ಪ, ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ರಾಯಸಂದ್ರ ರವಿಕುಮಾರ್, ಸಹ ಸಂಚಾಲಕ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಗೀತಾ ರಾಜಣ್ಣ, ಮುಖಂಡರಾದ ಲೋಕೇಶ್ವರ್, ಟಿ.ಜಿ.ಲಿಂಗರಾಜು, ಕೇಶವಮೂರ್ತಿ, ಮರಿಚನ್ನಮ್ಮ ಇದ್ದರು.

Get real time updates directly on you device, subscribe now.

Comments are closed.

error: Content is protected !!