ಕಾಂಗ್ರೆಸ್, ಜೆಡಿಎಸ್ ಮಧ್ಯೆ ಗಿಫ್ಟ್ ಫೈಟ್

ಗಿಫ್ಟ್ ತುಂಬಿದ್ದ ಲಾರಿ ತಡೆದ ಜೆಡಿಎಸ್ ಕಾರ್ಯಕರ್ತರು- ಕೈ ಕಾರ್ಯಕರ್ತರ ಕಿಡಿ

242

Get real time updates directly on you device, subscribe now.


ಕುಣಿಗಲ್: ಗಿಫ್ಟ್ ಐಟಂ ತುಂಬಿದ್ದ ಟ್ರಕ್ಕನ್ನು ಜೆಡಿಎಸ್ ಕಾರ್ಯಕರ್ತರು ತಡೆ ಹಿಡಿದಿದ್ದು ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದು ಗೊಂದಲ ಪರಿಸ್ಥಿತಿ ಉಂಟಾದ ಘಟನೆ ಬುಧವಾರ ಸಂಜೆ ಅಮೃತೂರಿನಲ್ಲಿ ನಡೆದಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಾಸಕರು ಚುನಾವಣೆಗೆ ಮುನ್ನವೇ ಮತದಾರರಿಗೆ ಹಂಚಲು ಇತರೆ ಗಿಫ್ಟ್ ಸಾಮಾನುಗಳನ್ನು ಹರಿಯಾಣ ರಾಜ್ಯದಿಂದ ಎರಡು ಬೃಹತ್ ಲಾರಿಗಳಲ್ಲಿ ತರಿಸಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಮತ್ತು ಜೆಡಿಎಸ್ ಕಾರ್ಯಕರ್ತರು ಗಿಫ್ಟ್ ಐಟಂಗಳನ್ನು ಸಂಗ್ರಹಿಸಲು ಗುರುತಿಸಲಾಗಿದ್ದ ಅಮೃತೂರು ಗೋದಾಮಿನಲ್ಲಿ ಇಳಿಸಲು ಮುಂದಾದಾಗ ಜೆಡಿಎಸ್ ಮುಖಂಡರು ವಾಹನಗಳನ್ನು ತಡೆದು ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.

ಈ ಮಧ್ಯೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಕ್ರಮ ಖಂಡಿಸಿದ ಕಾಂಗ್ರೆಸ್ ಮುಖಂಡರು ಆಕ್ಷೇಪಿಸಿ ಗೋದಾಮಿನ ಮುಂಭಾಗದಲ್ಲೇ ಜೆಡಿಎಸ್ ಮುಖಂಡರೊಂದಿಗೆ ಕೈ ಕೈ ಮಿಲಾಯಿಸಲು ಮುಂದಾದರು. ಪರಿಸ್ಥಿತಿ ಕೈ ಮೀರುವ ಹಂತದಲ್ಲಿ ಅಮೃತೂರು ಸಿಪಿಐ ಅರುಣ್ ಸಾಲೋಂಕಿ ಹಾಗೂ ಪಿಎಸ್ಐ ಮಂಗಳ ಗೌರಮ್ಮ ಮತ್ತು ಸಿಬ್ಬಂದಿ, ಎರಡು ಕಡೆಯವರನ್ನು ಚದುರಿಸಿದರು. ಕಾಂಗ್ರೆಸ್ ನ ಮುಖಂಡರು ಹಾಲಿ ತರಿಸಿರುವ ಎಲ್ಲಾ ಗಿಪ್ಟ್ ಐಟಂಗಳಿಗೆ ಸಮರ್ಪಕ ತೆರಿಗೆ ಪಾವತಿ ಮಾಡಿರುವ ದಾಖಲೆಗಳಿವೆ ಎಂದರೆ, ಜೆಡಿಎಸ್ ಅಧ್ಯಕ್ಷ ಜಗದೀಶ್ ಬೆಂಗಳೂರಿಗೆ ಹೋಗಬೇಕಾಗಿರುವ ಬೃಹತ್ ಲಾರಿಗಳು ಕುಣಿಗಲ್ ತಾಲೂಕಿನ ಅಮೃತೂರಿಗೆ ಬಂದಿರುವುದರ ಹಿಂದೆ ಯಾವುದೇ ಸಮರ್ಪಕ ದಾಖಲೆಗಳು ಹಾಗೂ ತೆರಿಗೆ ಪಾವತಿ ಮಾಡಿರುವ ದಾಖಲೆಗಳಿಲ್ಲ. ಇದರ ಹಿಂದೆ ದೊಡ್ಡ ತೆರಿಗೆ ವಂಚನೆಯ ವ್ಯವಸ್ಥಿತ ಹುನ್ನಾರವಿದೆ. ತೆರಿಗೆ ವಂಚನೆ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರು ಹಾಗೂ ತೆರಿಗೆ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ತುಮಕೂರಿನಿಂದ ಆಗಮಿಸಿರುವ ತೆರಿಗೆ ಅಧಿಕಾರಿಗಳು ಈ ಬಗ್ಗೆ ಅಗತ್ಯ ದಾಖಲೆ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸ್ಥಳದಲ್ಲಿ ಮೇಲ್ನೋಟಕ್ಕೆ ಶಾಂತ ಪರಿಸ್ಥಿತಿ ಇದ್ದರೂ ಎರಡು ಪಕ್ಷದ ಕಾರ್ಯಕರ್ತರು ದೂರದಲ್ಲಿ ನಿಂತು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!